ಚಾಮರಾಜನಗರ: ಅಪ್ರಾಪ್ತ ಬಾಲಕಿಯ ಜೊತೆ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಇಂದು ಮಕ್ಕಳ ರಕ್ಷಣಾ ಜಿಲ್ಲಾ ಘಟಕವು  ತಡೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.‌

ಹನೂರು ಪಟ್ಟಣದ ಪೌರಕಾರ್ಮಿಕ ಕಾಲೋನಿಯ 2ನೇ ವಾರ್ಡಿನ ಅಪ್ರಾಪ್ತ ಬಾಲಕಿ ಹಾಗೂ ಗುಂಡ್ಲುಪೇಟೆ ಪಟ್ಟಣದ ವಿನೋದ್ ಎಂಬಾತನಿಗೆ ಮೂರು ತಿಂಗಳ ಹಿಂದೆಯೇ ಮದುವೆಗೆ ನಿಶ್ಚಯ ಮಾಡಲಾಗಿತ್ತು.

ಆಗಸ್ಟ್ 29 ರಂದು ತಮಿಳುನಾಡಿನ ಬಣ್ಣಾರಿ ದೇವಾಲಯದಲ್ಲಿ ವಿವಾಹ ಮಾಡಲು ಕುಟುಂಬಸ್ಥರು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವಾಣ ೧೦೯೮ ಸಂಖ್ಯೆಗೆ  ಸಾರ್ವಜನಿಕರು ಕರೆ ಮಾಡಿ ದೂರು ನೀಡಿದ್ದ ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮನೆಗೆ ಭೇಟಿ ನೀಡಿ ಅಪ್ರಾಪ್ತ ಬಾಲಕಿ ಹಾಗೂ ಕುಟುಂಬಸ್ಥರಿಂದ ಅಗತ್ಯ ಮಾಹಿತಿ ಪಡೆದು ಬಾಲ್ಯವಿವಾಹ ನಿಲ್ಲಿಸಿದ್ದಾರೆ. ಬಾಲಕಿಯನ್ನು ರಕ್ಷಿಸಿ  ಚಾಮರಾಜನಗರದ ಸಾಂತ್ವನ ಕೇಂದ್ರಕ್ಕೆ ಕರೆತರಲಾಗಿದೆ.