ಚಾಮರಾಜನಗರ : ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಸೀಗೆ ಬೆಟ್ಟದಲ್ಲಿ ಜೇನು ಸಂಗ್ರಹಿಸಲು ಕಾಡಿಗೆ ತೆರಳಿದ್ದ ಸೋಲಿಗ ಯುವಕನ ಮೇಲೆ ಕರಡಿಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿಸಂರಕ್ಷಿತ ಪ್ರದೇಶದ ಸೀಗೆ ಬೆಟ್ಟ ಪೋಡಿನ ನಿವಾಸಿ ರಂಗೇಗೌಡರ ಮಗ ಸಿದ್ದ (30) ಎಂಬ ಯುವಕನೇ ಕರಡಿ ದಾಳಿಗೆ ಸಿಕ್ಕಿ ಸಾವನ್ನಪ್ಪಿದ ವ್ಯಕ್ತಿ. ಸಿದ್ದ ಜೇನು ಸಂಗ್ರಹಿಸಲು ಕಾಡಿನೊಳಗೆ ಹೋದಾಗ ಕರಡಿಯೊಂದು ದಾಳಿ ನಡೆಸಿದ ಪರಿಣಾಮ ಮುಖ ಮತ್ತು ಕಾಲುಗಳು ತೀವ್ರ ಸ್ವರೂಪದ ಗಾಯವಾಗಿತ್ತು. ಕರಡಿ ದಾಳಿಯಿಂದ ರಕ್ತಸಿಕ್ತನಾಗಿ ಅಲ್ಲೇ ಮೃತಪಟ್ಟಿದ್ದಾನೆ.

ಪರಿಹಾರ ವಿತರಣೆ: ಕರಡಿ ದಾಳಿಯಿಂದ ಮೃತಪಟ್ಟ ಬಿಳಿಗಿರಿರಂಗನ ಬೆಟ್ಟದ ಸೀಗೆಬೆಟ್ಟ ಪೋಡಿನ ನಿವಾಸಿ ಸಿದ್ದು ಅವರ ನಿವಾಸಕ್ಕೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಿದ್ದು ರವರ ತಾಯಿ ಬೇದಮ್ಮ ಅವರಿಗೆ ಸರ್ಕಾರದ ಪರವಾಗಿ 5 ಲಕ್ಷ ರೂ. ಗಳ ಚೆಕ್ ವಿತರಣೆ ಮಾಡಿದರು. ಉಳಿಕೆ ಪರಿಹಾರ ನಿಧಿಯನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಉಪವಿಭಾಗಾಧಿಕಾರಿ ಮಹೇಶ್, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿ ಶ್ರೀಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿ ವಾಸು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ರಾಮ ಪಂಚಾಯಿತಿ ಸದಸ್ಯ ಸಿ.ಡಿ. ಮಹದೇವ್ ಇದ್ದರು.