ಚಾಮರಾಜನಗರ: ಕೇಂದ್ರ ಸರ್ಕಾರ ಪಾರ್ಲಿಮೆಂಟ್ ನಲ್ಲಿ ನಾಲ್ಕು ಲೇಬರ್ ಕೋಡ್ ಗಳನ್ನು ಅಂಗೀಕರಿಸಿ ಕಾರ್ಮಿಕ ವಿರೋಧಿ ಅಂಶಗಳನ್ನು ಜಾರಿಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ(ಸಿಐಟಿಯು) ಚಾಮರಾಜನಗರ ತಾಲೂಕು ಘಟಕ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನ ಮೆರವಣಿಗೆ ಹೊರಟು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮ್ಮನಪುರ ಸುರೇಶ್ ಅವರು ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರು, ಸರ್ಕಾರ ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸಿದ್ದಲ್ಲಿ ಕೆಲಸಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಹೀಗಾಗಿ 4 ಲೇಬರ್ ಕೋಡ್ ಗಳನ್ನು ಜಾರಿ ಮಾಡಬಾರದೆಂದು ಒತ್ತಾಯಿಸಿದರು. ಅಲ್ಲದೆ ಕನಿಷ್ಠ ವೇತನ 31ಸಾವಿರ ನಿಗದಿಪಡಿಸಬೇಕು, ಸೇವಾ ಹಿರಿತನಕ್ಕೆ ಭತ್ಯೆ ಹೆಚ್ಚಳ ಮಾಡಬೇಕು, ಪಿಂಚಣಿ ಸೌಲಭ್ಯ ನೀಡಬೇಕು, ಆರೋಗ್ಯ ವಿಮೆ ಜಾರಿಗೊಳಿಸಬೇಕು. ಪಂಚಾಯಿತಿಗೊಂದು ಎಸ್ ಡಿಎ ಮತ್ತು 2ನೇ ಡಿಇಓ ನೇಮಕಾತಿ ಮತ್ತು ಸ್ವಚ್ಛ ವಾಹಿನಿಯರ ಒಡಂಬಡಿಕೆ ರದ್ದು ಸಿಂಗಲ್ ಚಾಲಕರನ್ನು ಪರಿಗಣಿಸಿ 15ಸಾವಿರ ಗೌರವ ಧನ ನೀಡಬೇಕೆಂದು ತಿಳಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ನಂದೀಶ್, ನೌಕರರಾದ ಅಭಿಲಾಶ್, ಬಸವರಾಜು, ಕುಮಾರ್, ಶಿವಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.