ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟದ ಮಾದ ಪ್ಪನ ಹುಂಡಿಗಳಲ್ಲಿ ಕಳೆದ 34 ದಿನಗಳ ಅವಧಿಯಲ್ಲಿ 2.67 ಕೋಟಿ ರೂ. ಸಂಗ್ರಹವಾಗಿದೆ.

ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ 8 ಗಂಟೆಯವರೆಗೂ ನಡೆಯಿತು.

ಕಾರ್ತಿಕ ಮಾಸ, ಭಟ್ಟಿ ಅಮಾ ವಾಸ್ಯೆ, ಸರ್ಕಾರಿ ರಜಾ ದಿನ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,67,99,396 ನಗದು 73 ಗ್ರಾಂ ಚಿನ್ನ ಹಾಗೂ 3.900ಗ್ರಾಂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಇ ಹುಂಡಿಯಿಂದ 33.9258 ರೂ., ಒಮಾನ್‌ನ 10 ನೋಟುಗಳು ಸೇರಿದಂತೆ 3 ವಿದೇಶಿ ಕರೆನ್ಸಿಗಳು, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 21 ನೋಟುಗಳು ಸಂಗ್ರಹವಾಗಿದೆ.

ಕಾಣಿಕೆ ಹಣ ಎಣಿಕೆ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಪತ್ರ ಸಲಹೆಗಾರರಾದ ನಾಗೇಶ್, ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಸಿಬ್ಬಂದಿ ಹರೀಶ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.