ಕಾಸರಗೋಡು : ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯ ಗೊಂಡ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ವಾಮಂಜೂರು ಚೆಕ್ ಪೋಸ್ಟ್ ಬಳಿ ನಡೆದಿದೆ.

ಪೈವಳಿಕೆ ಬಾಯಿಕಟ್ಟೆಯ ಜನಾರ್ಧನ ಹಾಗೂ ಮಕ್ಕಳಾದ ವರುಣ್ ಮತ್ತು ಕಿಶನ್ ಮೃತಪಟ್ಟ ವರು. ಕಾರಿನಲ್ಲಿದ್ದ ಉಪ್ಪಿನಂಗಡಿಯ ರತ್ನ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಡಿದು ಈ ದುರ್ಘಟನೆ ನಡೆದಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸುಮಾರು 50 ಮೀಟರ್ ತನಕ ಕಾರು ಮುಂದಕ್ಕೆ ಸಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.

