ಬೀದರ್: ಮಾವಿನ ಹಣ್ಣು ಸೇವಿಸಿದ ಅಸ್ವಸ್ಥಗೊಂಡ ಬೀದರ್ ಮೂಲದ ಇಬ್ಬರು ಸಹೋದರಿಯರು ಹೈದರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ನಡೆದಿದೆ.

17 ವರ್ಷದ ಭವಾನಿ ವೈಜಿನಾಥ ಮೇತ್ರೆ ಹಾಗೂ 14 ವರ್ಷದ ಸಂಧ್ಯಾರಾಣಿ ಮೇತ್ರೆ ಮೃತ ಯುವತಿಯರು. ಜೂನ್ 9ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಮಾವಿನ ಹಣ್ಣು ಸೇವಿಸಿದ್ದ ವೇಳೆ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ತಾಯಿ ಇಂದುಮತಿ ಹಾಗೂ ಐವರು ಪುತ್ರಿಯರು ಮಾವಿನ ಹಣ್ಣು ಸೇವಿಸಿದ ಬಳಿಕ ವಾಂತಿ ಮತ್ತು ಭೇದಿಯಿಂದ ಅಸ್ವಸ್ಥಗೊಂಡಿದ್ದರು.

ತಕ್ಷಣ ಕುಟುಂಬವನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಮತ್ತು ಸಂಧ್ಯಾರಾಣಿ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಹೋದರಿ ವಿಜಯಶ್ರೀ (19) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾಯಿ ಹಾಗೂ ಮತ್ತೊಬ್ಬ ಸಹೋದರಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ತಿಳಿಯಲಿದೆ. ಈ ಸಂಬಂಧ ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.