ಔರಾದ್: ಇಷ್ಟು ದಿನ ಬೇಸಿಗೆ ಬಿಸಿಲಿನ ತಾಪದಿಂದ ಬಸವಳಿದ ಪಟ್ಟಣದ ಜನರಿಗೆ ಈಗ ಮಳೆಯಾದರೆ ಚರಂಡಿ ನೀರು ಮನೆ ಹಾಗೂ ರಸ್ತೆ ಮೇಲೆ ಹರಿಯುವ ಆತಂಕ ಎದುರಾಗಿದೆ.

ಪಟ್ಟಣದ ಶಿಕ್ಷಕರ ಕಾಲೊನಿಯ ದೇವಿ ಮಂದಿರದ ಬಳಿ ಚರಂಡಿ ನೀರಿಗೆ ಮುಕ್ತಿ ಸಿಗುವಂತಿಲ್ಲವಾಗಿದೆ. ಮಳೆಯಾದರೆ ಇಲ್ಲಿ ಬೇರೆ ಬೇರೆ ಕಡೆಯಿಂದ ನೀರು ಸಂಗ್ರಹವಾಗುತ್ತದೆ.

ಈ ನೀರು ಮುಂದೆ ಹರಿದು ಹೋಗದೆ ನೈರ್ಮಲ್ಯ ಸಮಸ್ಯೆ ಎದುರಾಗುತ್ತದೆ. ಈ ನಡುವೆ ಹಾವು, ಚೇಳಿನ ಕಾಟದಿಂದ ಇಲ್ಲಿಯ ನಿವಾಸಿಗಳು ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಎರಡು ದಶಕದ ಹಿಂದೆ ಶಿಕ್ಷಕರ ಕಾಲೊನಿ ಎಂದರೆ ಸ್ವಚ್ಛತೆಗೆ ಹೆಸರುವಾಸಿಯಾಗಿತ್ತು. ಆದರೆ ಈಗ ಇಲ್ಲಿಯ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಪೂರ್ಣ ಹಾಳಾಗಿವೆ. ನಾಗರಿಕರು ನೆಮ್ಮದಿಯಿಂದ ಓಡಾಡಬೇಕಾದ ಉದ್ಯಾನಗಳು ನಾಯಿ, ಹಂದಿಗಳ ವಾಸವಾಗಿ ಪರಿಣಮಿಸಿದೆ ಎಂದು ಕಾಲೊನಿ ನಿವಾಸಿ ಅನೀಲ ಜಿರೋಬೆ ಆಕ್ರೋಶ ಹೊರ ಹಾಕಿದ್ದಾರೆ.

ಪಟ್ಟಣದ ಬಹುತೇಕ ಕಡೆ ಚರಂಡಿ ವ್ಯವಸ್ಥೆ ಸರಿಯಿಲ್ಲ. ಈಗ ಮಳೆಗಾಲ ಬರಲಿರುವ ಹಿನ್ನೆಲೆಯಲ್ಲಿ ಚರಂಡಿಯ ಹೂಳು ತೆಗೆದು ನೀರು ಸುಗಮವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.