ಬೀದರ್: ಮುಂಗಾರು ಮಳೆ ಚುರುಕು ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಎಲ್ಲ ತರಕಾರಿ ಪದಾರ್ಥಗಳ ಬೆಲೆ ಏಕಾಏಕಿ ಗಗನಕ್ಕೇರಿದೆ. ಅದರಲ್ಲೂ ಟೊಮೆಟೊ ಬೆಲೆ ಏಕಾಏಕಿ ಜಿಗಿದಿದೆ. ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ ಟೊಮೆಟೊ ₹25ರಿಂದ ₹30ರ ಆಸುಪಾಸಿನಲ್ಲಿತ್ತು. ನಾಲ್ಕೈದು ದಿನಗಳ ಹಿಂದೆ ಮಧ್ಯಮ ಗಾತ್ರದ ಗುಣಮಟ್ಟದ ಟೊಮೆಟೊ ಪ್ರತಿ ಕೆ.ಜಿಗೆ ₹40ರಿಂದ ₹50 ಇತ್ತು.

ಈಗ ಒಂದೇ ಮಟ್ಟಿಗೆ ₹100ರಿಂದ ₹120ಕ್ಕೆ ಏರಿಕೆ ಕಂಡಿದೆ. ದಿನ ಕಳೆದಂತೆ ಇದು ಇನ್ನೂ ಹೆಚ್ಚಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಆದಕಾರಣ ಗ್ರಾಹಕರು ಟೊಮೆಟೊ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಕಳೆದೊಂದು ತಿಂಗಳಿಂದ ಬೀನ್ಸ್‌ ದರ ಯಥಾಸ್ಥಿತಿಯಲ್ಲಿದೆ. ಪ್ರತಿ ಕೆ.ಜಿ ಬೀನ್ಸ್‌ ₹180ರಿಂದ ₹200ಕ್ಕೆ ಮಾರಾಟ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಚವಳಿಕಾಯಿ, ಬೀನ್ಸ್‌, ದಪ್ಪ ಮೆಣಸಿನಕಾಯಿ, ಬೆಂಡೆಕಾಯಿ, ಕುಂಬಳಕಾಯಿ, ಬದನೆಕಾಯಿ, ಹೀರೆಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಪ್ರತಿ ಕೆ.ಜಿಗೆ ₹80ರಿಂದ ₹100ರ ಆಸುಪಾಸಿನಲ್ಲಿದೆ. ಸೊಪ್ಪು ಕೂಡ ಹಿಂದೆ ಬಿದ್ದಿಲ್ಲ. ಮಧ್ಯಮ ಗಾತ್ರದ ಒಂದು ಕಟ್ಟು ಮೆಂತೆ ಪಲ್ಯ ₹40ಕ್ಕೆ ಮಾರಾಟವಾದರೆ, ಪಾಲಕ್‌, ಸಬ್ಬಕ್ಕಿ ₹30ರಿಂದ ₹40ರ ಆಸುಪಾಸಿನಲ್ಲಿದೆ.

ಏಕಾಏಕಿ ಬೆಲೆ ಹೆಚ್ಚಳ ಆಗಿರುವುದರಿಂದ ಗ್ರಾಹಕರು ಕಂಗಲಾಗಿದ್ದಾರೆ. ಎಷ್ಟೇ ಚೌಕಾಸಿ ಮಾಡಿದರೂ ವ್ಯಾಪಾರಿಗಳು ಐದು ರೂಪಾಯಿ ಸಹ ಕಡಿಮೆ ಮಾಡುತ್ತಿಲ್ಲ. ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ, ‘ಮಾಲು ಬರುತ್ತಿಲ್ಲ. ಮಳೆ ಹೆಚ್ಚಾದರೆ ಇಷ್ಟು ಕೂಡ ಸಿಗುವುದಿಲ್ಲ. ನಿಮಗೆ ಇಷ್ಟವಿದ್ದರೆ ಖರೀದಿಸಿ, ಇಲ್ಲವಾದರೆ ಬಿಡಿ’ ಎಂದು ಖಂಡತುಂಡವಾಗಿ ಹೇಳುತ್ತಿದ್ದಾರೆ.

ಈ ಹಿಂದೆ ಮಾರುಕಟ್ಟೆಗೆ ಬಂದವರು ಕನಿಷ್ಠ ಎರಡ್ಮೂರು ದಿನಗಳಿಗೆ ಸಾಕಾಗುವಷ್ಟು ತರಕಾರಿ ಕೊಂಡೊಯ್ಯುತ್ತಿದ್ದರು. ಈಗ ಒಂದು ದಿನಕ್ಕೆ ಸಾಕು ಎನ್ನುತ್ತಿದ್ದಾರೆ. ಕೆಲವರಂತೂ ತರಕಾರಿ ಬೆಲೆ ಕೇಳಿ, ಬೆಲೆ ಕಡಿಮೆ ಆಗುವವರೆಗೆ ಬೇಳೆ, ಕಾಳು ಮಾಡಿಕೊಂಡು ಇದ್ದರಾಯ್ತು ಎಂಬ ಮನಸ್ಥಿತಿಗೆ ಬಂದಿದ್ದಾರೆ.