ಬೀದರ್: ಭಾಲ್ಕಿ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ಮೃತದೇಹ ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ಉಮರ್ಗಾ ಬಳಿಯ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಹಲವು ಅನುಮಾನಗಳನ್ನು ಉಂಟು ಮಾಡಿದೆ.

ಬಿಜೆಪಿ ಮುಖಂಡ ಹಾಗೂ ಯೋಗ ಶಿಕ್ಷಕ ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ ಧೋಂಡಿರಾಮ ಚಾಂದಿವಾಲೆ ಮೃತ ವ್ಯಕ್ತಿ.

ಇವರ ಮುಖದ ಮೇಲೆ ಗಂಭೀರ ಸ್ವರೂಪದ ಗಾಯಗಳು ಆಗಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.  ಚಾಂದಿವಾಲೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳು ವ್ಯಕ್ತವಾಗಿವೆ

ಮೃತನ ಜೇಬಿನಲ್ಲಿ ದೊರೆತ ಬಸ್‌ ಟಿಕೆಟ್‌ ಆಧರಿಸಿ, ಮಹಾರಾಷ್ಟ್ರ ಪೊಲೀಸರು ಮಾಹಿತಿಯನ್ನು ಮೃತನ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಕೆಲ ವರ್ಷಗಳಿಂದ ನಗರದ ಬರೀದ್‌ ಷಾಹಿ ಉದ್ಯಾನದಲ್ಲಿ ಉಚಿತ ಯೋಗ ಶಿಬಿರ ನಡೆಸಿಕೊಡುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲವಾಗಿದ್ದರು.

ಸದ್ಯ ಇವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಮ್ಮರ್ಗಾ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು ಮಾಡಲಾಗಿದೆ.