ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಬೆಳಕಿನ ವ್ಯವಸ್ಥೆಗಾಗಿ ನಡೆಯುತ್ತಿದ್ದ ಕಾಮಗಾರಿ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಶುಕ್ರವಾರ ನಡೆದಿದೆ.

ಜಿಗಣಿ ಸಮೀಪದ ಮುತ್ತುರಾಯಸ್ವಾಮಿ ದೊಡ್ಡಿ ನಿವಾಸಿ ಗುರಪ್ಪ (56) ಮೃತ ದುರ್ದೈವಿ. ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಬೆಳಕಿನ ವ್ಯವಸ್ಥೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಎಂ/ಎಸ್‌ ಎಂ.ಆರ್‌. ಎಲೆಕ್ಟ್ರಿಕಲ್ಸ್‌ ಸಂಸ್ಥೆಯ ಗುತ್ತಿಗೆ ಕಾರ್ಮಿಕರಾಗಿದ್ದರು. ಗುರಪ್ಪ ಶುಕ್ರವಾರ ಮಧ್ಯಾಹ್ನ ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್‌ಸಂಖ್ಯೆ 153ರ ಸಮೀಪ ಭೂಮಿಯಲ್ಲಿ ಅರ್ಥ್ ಪಿಟ್‌ ಕಾಮಗಾರಿ ನಡೆಸುತ್ತಿದ್ದರು.

ಕಾಮಗಾರಿ ವೇಳೆ ಕಾರ್ಮಿಕ ವಿದ್ಯುತ್‌ ಸಂಪರ್ಕಕ್ಕೆ ಬಂದ ಪರಿಣಾಮ ವಿದ್ಯುತ್‌ ಸ್ಪರ್ಶಗೊಂಡಿತ್ತು. ಅವರನ್ನು ತಕ್ಷಣವೇ ಸೇಂಟ್‌ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿ ಸಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಸಂಬಂಧಿತ ಅಧಿಕಾರಿಗಳು ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈ ದುರ್ಘ‌ಟನೆಯಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬದವರಿಗೆ ಬಿಎಂಆರ್‌ಸಿಎಲ್‌ ಸಂತಾಪ ವ್ಯಕ್ತಪಡಿಸಿದೆ.