ಬೆಂಗಳೂರು: ಮಗಳನ್ನು ಕಾಲೇಜಿಗೆ ಬಿಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ಗುಂಡಿಯಿಂದಾಗಿ ವಾಹನ ಸ್ಕಿಡ್ ಆಗಿ ಬಿದ್ದು, ಶಾಲಾ ಬಸ್ ಹರಿದು ಭೀಕರವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಕಾಂತಾ ಎಂದು ಗುರುತಿಸಲಾಗಿದೆ. ಕಾಂತಾ ಅವರು ತಮ್ಮ ಮಗಳು ನೇಹಾ ಅವರನ್ನು ಕಾಲೇಜಿಗೆ ಬಿಡಲು ಮಾರತ್ತಹಳ್ಳಿಯಿಂದ ಸಿದ್ದಾಪುರ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ರಸ್ತೆಯಲ್ಲಿದ್ದ ಗುಂಡಿ ಸರಿಯಾಗಿ ಕಾಣಿಸದೆ, ಅದಕ್ಕೆ ಸಿಲುಕಿ ಇಬ್ಬರೂ ಸವಾರರು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ.
ವಾಹನ ಸ್ಕಿಡ್ ಆಗಿ ಇಬ್ಬರೂ ಕೆಳಗೆ ಬಿದ್ದ ತಕ್ಷಣ, ಹಿಂದಿನಿಂದ ವೇಗವಾಗಿ ಬಂದ ಶಾಲಾ ಬಸ್ ಕಾಂತಾ ಅವರ ಮೇಲೆ ಹರಿದಿದೆ. ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್ ಅಪಘಾತದ ವೇಳೆ ಮಗಳು ನೇಹಾ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ವೈಟ್‌ಫೀಲ್ಡ್ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಾಲಾ ಬಸ್ ಚಾಲಕ ಹಾಗೂ ಅಪಘಾತದ ಕುರಿತು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

