ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿ ಆಗಿದ್ದಾರೆ. ನಟಿ, ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ.

ದರ್ಶನ್​ರ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಪರವಾಗಿ ಹೋರಾಟ ನಡೆಸುತ್ತಿದ್ದು, ವಕೀಲರನ್ನು ನೇಮಿಸಿ ದರ್ಶನ್​ರ ಬಿಡುಗಡೆಗೆ ಯತ್ನಿಸುತ್ತಿದ್ದಾರೆ. ಬೇರೆ-ಬೇರೆ ವಕೀಲರ ಭೇಟಿ ಮಾಡುತ್ತಿದ್ದಾರೆ. ಇದರ ನಡುವೆ ವಿಜಯಲಕ್ಷ್ಮಿ ಅವರಿಗೂ ಸಂಕಷ್ಟ ಎದುರಾಗಿದೆ. ಪ್ರಕರಣವೊಂದರಲ್ಲಿ ವಿಜಯಲಕ್ಷ್ಮಿ ಅವರನ್ನು ಎ1 ಆರೋಪಿಯನ್ನಾಗಿಸಲಾಗಿದ್ದು, ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ.

ಕಳೆದ ವರ್ಷ ಜನವರಿಯಲ್ಲಿ ದರ್ಶನ್​ರ ಮೈಸೂರಿನ ಫಾರಂ ಹೌಸ್​ ಮೇಲೆ ದಾಳಿ ಮಾಡಿದ್ದ ಪೊಲೀಸರು, ದರ್ಶನ್ ಅಕ್ರಮವಾಗಿ ಸಾಕಿಕೊಂಡಿದ್ದ ಬಾರ್ ಹೆಡೆಡ್ ಗೂಸ್ (ಬಾರ್ ಹೆಡೆಡ್ ಹೆಬ್ಬಾತು) ಪಕ್ಷಿಗಳನ್ನು ವಶಪಡಿಸಿಕೊಂಡಿದ್ದರು. ಈ ಪಕ್ಷಿಗಳನ್ನು ಸಾಕುವುದು ಕಾನೂನು ಪ್ರಕಾರ ಅಪರಾಧ. ಹಾಗಾಗಿ ಪಕ್ಷಿಗಳನ್ನು ವಶಪಡಿಸಿಕೊಂಡಿದ್ದ ಅರಣ್ಯ ಇಲಾಖೆ, ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿತ್ತು.

ನಿಯಮ ಬಾಹಿರವಾಗಿ ಪಕ್ಷಿಗಳನ್ನು ಸಾಕಿದ್ದ ಕಾರಣ, ಮೈಸೂರು ಫಾರಂ ಹೌಸ್ ನ ಮಾಲೀಕರಾಗಿರುವ ವಿಜಯಲಕ್ಷ್ಮಿ ದರ್ಶನ್, ಮ್ಯಾನೇಜರ್ ನಾಗರಾಜು ಹಾಗೂ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಕರೆಯಲಾಗಿತ್ತು. ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಎ1, ನಾಗರಾಜು ಎ2 ಹಾಗೂ ದರ್ಶನ್ ಎ3 ಆಗಿದ್ದರು. ಆದರೆ ಯಾರೂ ಸಹ ವಿಚಾರಣೆಗೆ ಬಂದಿರಲಿಲ್ಲ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧವಾಗಿದ್ದಾರೆ.