News Karnataka Kannada
Friday, May 03 2024
ಸಮುದಾಯ

ತುಮಕೂರು: ವೀರಶೈವ-ಲಿಂಗಾಯಿತ ರುದ್ರಭೂಮಿ ಲೋಕಾರ್ಪಣೆ

Tumakuru: Veerashaiva-Lingayat burial ground inaugurated
Photo Credit : News Kannada

ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿವತಿಯಿಂದ ನಗರದ ಗಂಗಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೀರಶೈವ-ಲಿಂಗಾಯಿತ ರುದ್ರಭೂಮಿ ಲೋಕಾರ್ಪಣೆ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ, ಅಟವಿ ಸುಕ್ಷೇತ್ರದ ಶ್ರೀ ಅಟವಿ ಶಿವಲಿಂಗಸ್ವಾಮೀಜಿ, ಹಿರೇಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಕನಹಳ್ಳಿ ಜಂಗಮ ಮಠದ ಶ್ರೀಗಂಗಾಧರಸ್ವಾಮೀಜಿ,ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

ಕಾರ್ಯಕ್ರಮಕ್ಕೆ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು ಸಮಾಜ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮಲ್ಲಿ ನಾವೇ ಭಿನ್ನಮತ ಮೂಡಿಸಿಕೊಂಡರೆ ಏನನ್ನು ಸಾಧಿಸು ಸಾಧ್ಯವಿಲ್ಲ.ಸ್ವಲ್ಪ ಯಾಮಾರಿದರೂ ಇರುವುದನ್ನು ಕಿತ್ತುಗೊಂಡು ಬಿಡುತ್ತಾರೆ.ಇದು ನಾನು ನಿಮಗೆ ನೀಡುತ್ತಿರುವ ಎಚ್ಚರಿಕೆ.ನನ್ನ ಕಾಲ ಮುಗಿಯಿತು. ಈಗಾಗಲೇ ಪಕ್ಷದ ಹೈಕಮಾಂಡ್‌ಗೆ ಮುಂದಿನ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ.ಮುಂದೆ ಯಾರೇ ಬರಲಿ ಅವರ ಸಹಾಯ ಪಡೆದು, ಸಮಾಜವನ್ನು ಅಭಿವೃದ್ದಿಯ ಕಡೆಗೆ ತೆಗೆದುಕೊಂಡು ಹೋಗಿ ಎಂದು ಕಿವಿ ಮಾತು ಹೇಳಿದರು.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ರುದ್ರಭೂಮಿಗಳಿಗೆ ವಿಶೇಷ ಸ್ಥಾನವಿದೆ. ಎಲ್ಲರೂ ಕೊನೆಗೆ ಒಂದು ದಿನ ಹೋಗಲೇಬೇಕು. ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಟಿ.ಬಿ.ಶೇಖರ್, ಉಪಾಧ್ಯಕ್ಷರಾದ ಚಂದ್ರಮೌಳಿ ಅವರುಗಳು ರುದ್ರಭೂಮಿಯ ಪ್ರಸ್ತಾಪ ಮಾಡಿದ್ದ  ಹಿನ್ನೇಲೆಯಲ್ಲಿ ಗಂಗಸಂದ್ರದ ಶಿಂಷಾ ನದಿಯ ದಡದಲ್ಲಿ ಸುಮಾರು ೫ ಎಕರೆ ಜಾಗದಲ್ಲಿ ತಲೆ ಎತ್ತಿರುವ ವೀರಶೈವ-ಲಿಂಗಾಯಿತ ರುದ್ರಭೂಮಿ ನಿರ್ಮಾಣಗೊಂಡಿದೆ. ವೀರಶೈವರಿ ಗಲ್ಲದೆ ಬೇರೆ ಸಮುದಾಯಗಳಿಗೂ ಇದರ ಅಕ್ಕ,ಪಕ್ಕದಲ್ಲಿ ಭೂಮಿ ನೀಡಲಾಗಿದೆ.ಇದರ ಸದ್ಬಳಕೆಯಾಗಬೇಕು ಎಂದು ಸಲಹೆ ನೀಡಿದರು.

ಗಡಿನಾಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ,ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ,ಇಂದು ಲೋಕಾರ್ಪಣೆಗೊಂಡಿರುವ ವೀರಶೈವ-ಲಿಂಗಾಯಿತ ರುದ್ರಭೂಮಿಯ ಮಂಜೂರಾತಿಯ ಹಿಂದೆ ಸಂಸದ ಜಿ.ಎಸ್.ಬಸವ ರಾಜು ಅವರು ಶ್ರಮವಿದೆ. ತುಮಕೂರು ಜಿಲ್ಲೆಯ ಹಲವು ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಸಂಸದರ ನಿರಂತರ ಪ್ರಯತ್ನವಿದೆ. ಹುಟ್ಟಿದವನಿಗೆ ಸಾವು ನಿಶ್ಚಿತ. ಹುಟ್ಟು ಸಾವಿನ ನಡುವೆ ನಾಲ್ಕು ಜನರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡಿ, ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್,ಊರು ಬೆಳೆದು, ಜನಸಂಖ್ಯೆ ಹೆಚ್ಚಾದಂತೆ ಈಗಿರುವ ರುದ್ರಭೂಮಿ ಕಿರಿದಾದ ಹಿನ್ನೆಲೆಯಲ್ಲಿ ಊರಿನ ಹೊರವಲಯದಲ್ಲಿ ದೊಡ್ಡದಾದ ರುದ್ರಭೂಮಿಯ ಅಗತ್ಯವಿತ್ತು. ಹಾಗಾಗಿ ಇಂದು ಗಂಗಸಂದ್ರದಲ್ಲಿ ಸಂಸದ ಜಿ.ಎಸ್.ಬಸವರಾಜು, ಮಾಜಿಸಚಿವ ಸೊಗಡು ಶಿವಣ್ಣ ಅವರ ಸಹಕಾರದಿಂದ ಈ ಭೂಮಿಯನ್ನು ಪಡೆದು ವೀರಶೈವ ರುದ್ರಭೂಮಿಗೆ ಚಾಲನೆ ನೀಡಲಾಯಿತು. ಸಂಸದರು, ಶಾಸಕರ ನಿಧಿ ಹಾಗೂ ಸಾರ್ವಜನಿಕರ ಧೇಣಿಯಿಂದ ಇಂದು ಸುಸಜ್ಜಿತ ರುದ್ರಭೂಮಿ ತಲೆ ಎತ್ತಿದೆ.ಇಲ್ಲಿಗೆ ಬಂದವರಿಗೆ ಒಂದು ಆಹ್ಲಾದಕರ ವಾತಾವರಣ ನಿರ್ಮಾಣಕ್ಕೆ ರುದ್ರವನ, ಶ್ರೀಸಿದ್ದೇಶ್ವರಸ್ವಾಮಿ ದೇವಾಲಯ ಇದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತುಮಕೂರಿನಲ್ಲಿ ೧೯೦೨ರಲ್ಲಿ ವೀರಶೈವ-ಲಿಂಗಾಯಿತರ ರುದ್ರಭೂಮಿ ಇತ್ತು.೧೯೫೭ರಲ್ಲಿ ಬನಶಂಕರಿಯಲ್ಲಿ ಒಂದು ರುದ್ರಭೂಮಿ ಆರಂಭವಾಯಿತು. ಪ್ರಸ್ತುತ ಗಂಗಸಂದ್ರದಲ್ಲಿ ರುದ್ರಭೂಮಿ ಆರಂಭಗೊಂಡಿದೆ.ಇದು ವೀರಶೈವ ಸಮಾಜದ ದೂರದೃಷ್ಟಿಯ ಫಲ.ಇದು ಸ್ಮಶಾನವಲ್ಲ.ಜೋರ್ತಿಲಿಂಗ.ಭಾರತೀಯರಲ್ಲಿ ರುದ್ರಭೂಮಿ ಎಂದರೆ ಪೈಶಾಚಿಕ ಶಕ್ತಿಗಳು ಇರುವ ಜಾಗ ಎಂಬಕಲ್ಪನೆ ಇದೆ. ಆದರೆ ವಿದೇಶಿಯರಲ್ಲಿ ಆ ಭಾವನೆ ಇಲ್ಲ. ಅಲ್ಲಿ ರುದ್ರಭೂಮಿಗಳನ್ನು ರುದ್ರವನಗಳಾಗಿ ಅಭಿವೃದ್ದಿ ಪಡಿಸಿ,ಅಹ್ಲಾದಕರ ವಾತಾವರಣ ನಿರ್ಮಾಣ ಮಾಡಿರುತ್ತಾರೆ.ಅದೇ ಪರಿಕಲ್ಪನೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರತಿಯೊಬ್ಬರು ಇಲ್ಲಿಗೆ ಬರಲೇಬೇಕು.ಯಾವುದೆ ಗೊಂದಲವಿಲ್ಲದೆ ಇದನ್ನು ಬಳಕೆ ಮಾಡುವಂತಹ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಪೂಜಾ ಕೈಂಕರ್ಯಗಳು ನೆರವೇರಿದವು.ವೇದಿಕೆಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್,ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಚಂದ್ರಮೌಳಿ, ಮುಖಂಡರಾದ ಸಿ.ವಿ.ಮಹದೇವಯ್ಯ, ಕೆ.ಜೆ.ರುದ್ರಪ್ಪ, ಮೋಹನ್‌ಕುಮಾರ್ ಪಟೇಲ್, ಎಸ್.ಎಂ.ರಾಜು, ವೀಣಾ, ಕೋರಿ ಮಂಜುನಾಥ್, ಭಸ್ಮಾಂಗಿ ರುದ್ರಯ್ಯ, ಓಹಿಲೇಶ್ವರ್, ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ, ಮಹೇಶ್, ದೀಪಶ್ರೀ ಮಹೇಶ್ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಿದೇರ್ಶಕರುಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು