News Karnataka Kannada
Tuesday, April 23 2024
Cricket
ತುಮಕೂರು

ಸಹಭಾಗಿತ್ವದ ಸಂಶೋಧನೆ ಇಂದಿನ ಅಗತ್ಯ: ಬರ್ಮಿಂಗ್ಹ್ಯಾಮ್ ವಿವಿ ಪ್ರಾಧ್ಯಾಪಕ

University of Birmingham professor
Photo Credit : News Kannada

ತುಮಕೂರು: ಬದಲಾಗುತ್ತಿರುವ ಜಗತ್ತಿನ ಅಗತ್ಯಕ್ಕೆ ತಕ್ಕಂತೆ ಸಂಶೋಧನೆಗಳು ನಡೆಯಬೇಕು. ಸಹಭಾಗಿತ್ವದ ಸಂಶೋಧನೆ ಇಂದಿನ ಅಗತ್ಯ ಎಂದು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದ ಬ್ರೆಕ್ಸಿಟ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಅಲೆಕ್ಸ್ ಡಿ ರಾಯ್ಟರ್ ಹೇಳಿದರು.
ಇಂಗ್ಲೆಂಡಿನಿಂದ ತುಮಕೂರು ವಿದ್ಯಾನಿಲಯಕ್ಕೆ ಭೇಟಿ ನೀಡಿದ ಅಧ್ಯಯನ ತಂಡದ ಭಾಗವಾಗಿದ್ದ ಅವರು ಸೋಮವಾರ ವಿವಿ ಪ್ರಾಧ್ಯಾಪಕರೊಂದಿಗೆ
ಸಂವಾದ ನಡೆಸಿದರು.

ವಿಶ್ವವಿದ್ಯಾನಿಲಯಗಳನ್ನು ಶೈಕ್ಷಣಿಕ ಮಟ್ಟದ ಬೆಳವಣಿಗೆಯಲ್ಲಿ ಜತೆಯಾಗಿಸಿ, ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡರೆ ನಮ್ಮದೇ ವಿಭಿನ್ನ ಉತ್ಪನ್ನವನ್ನು ಹೊರತರಬಹುದು. ಜಗತ್ತಿನ ಮಾರುಕಟ್ಟೆ ಬಯಸುವುದೂ ಅದನ್ನೇ. ಪ್ರಾಯೋಗಿಕ ಅಂಶಗಳಲ್ಲಿ ಕೈಗಾರಿಕ ತಜ್ಞರ ಸಲಹೆ ಅಗತ್ಯವಿದೆ. ಇವೆಲ್ಲವೂ ಶೈಕ್ಷಣಿಕ ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಲಿದೆ ಎಂದರು. ಸಂಶೋಧನೆಯಲ್ಲಿ ನಾವು ಮೂವತ್ತು ವರ್ಷಗಳಷ್ಟು ಮುಂದಕ್ಕೆ ಯೋಚಿಸಬೇಕು. ಸಂಶೋಧನೆ ನಾಲ್ಕು ಗೋಡೆಗಳ ನಡುವೆ ನಡೆಯುವ ಕೆಲಸ ಅಲ್ಲ. ಅದು ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದ ಕಾರ್ಯಾಚರಣೆ ನಿರ್ವಹಣೆ ವಿಭಾಗದ ಹಿರಿಯ ಉಪನ್ಯಾಸಕ ಡಾ. ಶಿಶಾಂಕ್ ಮಾತನಾಡಿ, ವಿಶ್ವವಿದ್ಯಾನಿಲಯಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ ತೋರಿಸಲು ಸಹಭಾಗಿತ್ವದ ಅವಶ್ಯಕತೆಯಿದೆ. ವಿವಿಗಳು ಒಂದು ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಿದರೆ, ಅಲ್ಲಿ ಕಲಿಯುವ ಮಕ್ಕಳೂ ಸಹ ಗುಣಮಟ್ಟ ಶಿಕ್ಷಣ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದು ಹೇಳಿದರು.

ಸಂವಾದಕ್ಕೂ ಮುನ್ನ ತಮ್ಮ ಇತ್ತೀಚಿನ ಇಂಗ್ಲೆಂಡ್ ಅಧ್ಯಯನ ಪ್ರವಾಸದ ಅನುಭವಗಳನ್ನು ಹಂಚಿಕೊಂಡ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು, ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುವುದು ವಿವಿಯ ಪ್ರಸ್ತುತ ಯೋಜನೆಗಳಲ್ಲಿ ಒಂದು ಎಂದು ಹೇಳಿದರು. ಸಮಯಪ್ರಜ್ಞೆಯನ್ನು ಅರ್ಥ ಮಾಡಿಸಿ, ಪದವಿ ಹಂತದಲ್ಲೇ ಸ್ವಾವಲಂಬಿಗಳನ್ನಾಗಿ ಮಾಡಿ, ಸ್ನಾತಕ ಹಂತ ಮುಗಿಸುವ ಹೊತ್ತಿಗೆ ಸ್ವಯಂ ಉದ್ಯೋಗ ಸೃಷ್ಟಿಸುವ ಕಾರ್ಯಕ್ಷಮತೆಯನ್ನು ಬೆಳೆಸುವುದೇ ಮುಖ್ಯ ಉದ್ದೇಶ. ಇವೆಲ್ಲವಕ್ಕೂ ವಿಶ್ವವಿದ್ಯಾನಿಲಯದ ಅಧ್ಯಾಪಕರ, ಬೋಧಕೇತರ ವರ್ಗದ ಹಾಗೂ ವಿದ್ಯಾರ್ಥಿಗಳ ಸಹಕಾರವನ್ನು ಬಯಸುತ್ತೇನೆ ಎಂದರು. ತುಮಕೂರು ವಿವಿ ಕುಲಸಚಿವೆ ನಾಹಿದಾ, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ವಿವಿ ವಿಜ್ಞಾನ ನಿಕಾಯದ ಡೀನ್ ಡಾ. ಮನೋಹರ್ ಶಿಂಧೆ, ವಾಣಿಜ್ಯ ಮತ್ತು ವ್ಯವಹಾರ ನಿಕಾಯದ ಡೀನ್ ಡಾ. ಶೇಖರ್ ಬಿ., ಬೆಂಗಳೂರು ನಗರ ವಿವಿಯ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿ ಪ್ರತೀಕ್ ಕೆ. ಭಾಗವಹಿಸಿದ್ದರು. ವಿವಿಯ ಸಂಶೋಧನಾ ನಿರ್ದೇಶಕ ಡಾ. ಸುರೇಶ್ ಡಿ. ಸ್ವಾಗತಿಸಿ, ನಿರೂಪಿಸಿದರು. ಅಭಿವೃದ್ಧಿ ಮತ್ತು ಶೈಕ್ಷಣಿಕ ವಿಭಾಗದ ಉಪಕುಲಸಚಿವೆ ಡಾ. ಮಂಗಳಾಗೌರಿ ಎಂ. ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು