News Karnataka Kannada
Wednesday, May 08 2024
ಸಮುದಾಯ

ಸಮಗ್ರ ಯಕ್ಷಗಾನ ಕರ್ನಾಟಕದ ಅಸ್ಮಿತೆ: ಜಿ. ಎಂ. ಹೆಗಡೆ

Yakshagana
Photo Credit : News Kannada

ತುಮಕೂರು : ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ ಬಹಳ ಇದೆ. ಯಕ್ಷಗಾನದಲ್ಲಿ ಮೂಡಲಪಾಯ ಪಡುವಲಪಾಯ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆ ಇರುವುದು ಸತ್ಯ. ಹಾಗಾಗಿ ನಾವೆಲ್ಲರೂ ಸೇರಿ ಸಮಗ್ರ ಯಕ್ಷಗಾನವನ್ನು ಕರ್ನಾಟಕದ ಕಲೆಯಾಗಿಸುವ ಪಣ ತೊಡಬೇಕಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ| ಜಿ. ಎಂ. ಹೆಗಡೆ ಅಭಿಪ್ರಾಯಪಟ್ಟರು.

ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡಿದ್ದ ಮೂಡಲಪಾಯ ಯಕ್ಷಗಾನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ಎಂದರೆ ಅದು ಪುಸ್ತಕದ ವಿಚಾರವಲ್ಲ, ಮಸ್ತಕದ ವಿಚಾರ. ಪ್ರದರ್ಶನದಲ್ಲಿರುವ ಎಲ್ಲ ಪ್ರಸಂಗಗಳು ಮುದ್ರಣವಾಗುವುದು ಕಷ್ಟ, ಆದರೆ ಅದು ಒಳ್ಳೆಯ ಬೆಳವಣಿಗೆ. ಒಬ್ಬ ಕವಿ ಒಂದು ಕೃತಿಯನ್ನು ರಚಿಸಲು ಸಾಕಷ್ಟು ಸಮಯ ತೆಗೆದುಕೊಂಡರೂ ಭಾಗವತರು ಮಾತ್ರ ದಿನಬೆಳಗಾಗುವುದರೊಳಗೆ ಹತ್ತಾರು ಪ್ರಸಂಗಗಳನ್ನು ರಚಿಸಿರುತ್ತಾರೆ. ಇದು ಯಕ್ಷಗಾನಕ್ಕೆ ಇರುವ ಶಕ್ತಿ ಎಂದರು.

ಯಕ್ಷಗಾನ ನಿರಂತರ ಅಭ್ಯಾಸ ಅಧ್ಯಯನದಿಂದ ಹೊಸ ರೂಪ ಪಡೆದರೂ ತನ್ನತನವನ್ನು ಬಿಟ್ಟುಕೊಟ್ಟಿಲ್ಲ. ಯಕ್ಷಗಾನದ ಮೂಲ ಚೌಕಟ್ಟನ್ನು ಉಳಿಸಿಕೊಂಡೇ ಅದನ್ನು ಇನ್ನಷ್ಟು ಔನ್ನತ್ಯಕ್ಕೆ ಒಯ್ಯಬೇಕಾದ ಅಗತ್ಯ ಇದೆ ಎಂದರು. ಎ.ಎನ್. ಚನ್ನಬಸವಯ್ಯ ಅವರ ಯಕ್ಷಗಾನ ಕೃತಿಯನ್ನು ಪರಿಚಯಿಸಿದ ತುಮಕೂರು ವಿವಿಯ ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಡಿ.ವಿ. ಪರಮಶಿವಮೂರ್ತಿ, ಕಲಾವಿದರೇ ರಚನೆ ಮಾಡಿರುವ ಕೃತಿ ಆಗಿರುವುದರಿಂದ ಇಲ್ಲಿ ಭಾಷೆಗಿಂತ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪುರಾಣದ ಜನಪ್ರಿಯ ಪ್ರಸಂಗಗಳನ್ನು ಆಯ್ದು ರಚಿಸಿರುವುದು ಭಾಗವತರ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ತುಮಕೂರಿನ ಗುಬ್ಬಿ ಮಲ್ಲಣ್ಣಾರ್ಯ ಅವರ ಸಾಧನೆ ಮೂಡಲಪಾಯ ಯಕ್ಷಗಾನ ಉಳಿಯುವಿಕೆಗೆ ಕಾರಣವಾಗಿದೆ. ಅಂತಹ ಮಹಾನ್ ವಿದ್ವಾಂಸರ ಪ್ರಸಂಗಗಳು ಚನ್ನಬಸಯ್ಯ ಅವರ ಮೇಲೆ ಪ್ರಭಾವ ಬೀರಿರುವುದು ನಿಜಕ್ಕೂ ಸ್ವಾಗತಾರ್ಹ ವಿಚಾರ. ಪಡುವಲಪಾಯ ಯಕ್ಷಗಾನಕ್ಕೆ ಸಿಕ್ಕ ಮನ್ನಣೆ ಮೂಡಲಪಾಯ ಯಕ್ಷಗಾನಕ್ಕೆ ಸಿಗಲಿಲ್ಲ ಎಂದರು. ಮೂಡಲಪಾಯ ಯಕ್ಷಗಾನ ವಿದ್ಯಾವಂತರ ಕೈಸೇರಿತು. ಆದರೆ ಪಡುವಲಪಾಯ ಯಕ್ಷಗಾನ ಅನಕ್ಷರಸ್ಥರ ಗ್ರಾಮೀಣ ಜನರ ಬಯಲು ನಾಟಕವಾಗಿ ಉಳಿಯಿತು.

ಗ್ರಾಮೀಣ ಭಾಷೆಯಲ್ಲಿ ಮೂಡಲಪಾಯ ಯಕ್ಷಗಾನ ಮೂಡಿಬಂದಿರುವುದು ವಿಶೇಷ. ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ಬಂದಿರುವುದು ಸ್ತುತ್ಯರ್ಹ ಸಂಗತಿ ಎಂದರು. ಜಾನಪದ ಕಲೆಗಳನ್ನು ಮುದ್ರಣಕ್ಕೆ ತರಬೇಕೇ ಎಂಬ ವಾದ ಹಿಂದೆ ಇತ್ತು. ಜನಪದ ಕಲೆ ಪಠ್ಯ ರೂಪಕ್ಕೆ ಬರುವುದು ಅತ್ಯಂತ ಅಗತ್ಯ. ಜನಪದ ಕಲೆ ಕಲಾವಿದನ ಸಾಮಥ್ರ‍್ಯಕ್ಕೆ ಅನುಗುಣವಾಗಿ ಶ್ರೀಮಂತಿಕೆ ಪಡೆಯುತ್ತದೆ. ಕಾಲದಿಂದ ಕಾಲಕ್ಕೆ ಪ್ರಾದೇಶಿಕತೆಗೆ ಬೇರೆ ಬೇರೆ ರೂಪ ಪಡೆಯುತ್ತದೆ. ಜಾನಪದ ಕಲೆಯ ಪಠ್ಯ ಕನಿಷ್ಠ ಹತ್ತು ವರ್ಷಕ್ಕೊಮ್ಮೆಯಾದರೂ ಪರಿಷ್ಕರಣೆಗೆ ಒಳಗಾಗಬೇಕು. ಆದರ ಅದರ ಮೂಲಸತ್ವ ಅಳಿಯಬಾರದು ಎಂದರು. ಭಾಗವತ ಕಲ್ಮನೆ ನಂಜಪ್ಪನವರ ಕೃತಿಗಳನ್ನು ಪರಿಚಯಿಸಿದ ವಿದ್ವಾಂಸ ಡಾ. ಚಿಕ್ಕಣ್ಣ ಎಣ್ಣೆಕಟ್ಟೆ, ತುಮಕೂರಿನಲ್ಲಿ 183 ಭಾಗವತರಲ್ಲಿ ಎಂಟು ಮಂದಿ ಪ್ರಸಂಗ ರಚಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವರ್ತಮಾನ ಇತಿಹಾಸ ಪುರಾಣವನ್ನು ಶಿಷ್ಟವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಯಕ್ಷಗಾನ ಪ್ರಸಂಗಗಳು ಮಾಡುತ್ತಾ ಬಂದಿವೆ. ಅಳಿದು ಹೋಗುವ ಕಾಲದಲ್ಲಿ ಇಂತಹ ಕೃತಿಗಳನ್ನು ನೀಡಿರುವುದು ಕಲ್ಮನೆ ನಂಜಪ್ಪನವರ ಉತ್ಸಾಹದ ಪ್ರತೀಕವಾಗಿದೆ ಎಂದರು.

ಪುಸ್ತಕ ಬಿಡುಗಡೆ ಮಾಡಿದ ಹರಿಕಥೆ ವಿದ್ವಾಂಸ ಡಾ. ಲಕ್ಷ್ಮಣದಾಸ್, ಬಹಳ ಜನ ಯಕ್ಷಗಾನ ಕಲಾವಿದರಿದ್ದಾರೆ, ಅವರಿಗೆ ತಾತ್ವಿಕವಾದ ತಳಪಾಯಸಿಗಬೇಕಿದೆ. ಅಕಾಡೆಮಿಯು ಈ ನಿಟ್ಟಿನಲ್ಲಿ ಶ್ರಮಿಸಿದರೆ ಯಕ್ಷಗಾನ ಕರ್ನಾಟಕದಲ್ಲಿ ಸಮಗ್ರವಾಗಲು ಶ್ರಮಿಸಿದಂತೆ ಎಂದು ತಿಳಿಸಿದರು. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಎಸ್. ಸಿದ್ಧಲಿಂಗಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾರ್ ಎಸ್ ಎಚ್ ಶಿವರುದ್ರಪ್ಪ, ಸದಸ್ಯ ಸಂಚಾಲಕಿ ಆರತಿ ಪಟ್ರಮೆ ಉಪಸ್ಥಿತರಿದ್ದರು. ‘ದಕ್ಷಯಜ್ಞ’ ಮೂಡಲಪಾಯ ಪ್ರಸಂಗ ಹಾಗೂ ಯಕ್ಷಗಾನ ತಾಳಮದ್ದಳೆ ‘ಅಂಗದ ಸಂಧಾನ’ ಏರ್ಪಡಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು