ದೇವನಹಳ್ಳಿ: ಉತ್ತರಾಖಂಡದ ಚಾರಣ ದುರಂತದಲ್ಲಿ ಬದುಕುಳಿದ 13 ಕನ್ನಡಿಗ ಚಾರಣಿಗರು ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಡೆಹ್ರಾಡೂನ್‌ನಿಂದ ಸಚಿವ ಕೃಷ್ಣ ಭೈರೇಗೌಡ ಜೊತೆಗೆ ಚಾರಣಿಗರು ನಗರಕ್ಕೆ ಬಂದಿಳಿದರು.
ಉತ್ತರಾಖಂಡ ಉತ್ತರಕಾಶಿ ಬಳಿಯ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ರಾಜ್ಯದ 18 ಮಂದಿ ಸೇರಿ 22 ಮಂದಿ ತೆರಳಿದ್ದರು. ಆದರೆ ಅಲ್ಲಿನ ಹವಮಾನದ ವಿಪರೀತತೆಯಿಂದ 9 ಮಂದಿ ಮೃತಪಟ್ಟಿದ್ದರು. ಉಳಿದ 13 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಅವರೆಲ್ಲಾ ಇದೀಗ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಡೆಹ್ರಾಡೂನ್‌ನಿಂದ 6E6136 ಇಂಡಿಗೋ ವಿಮಾನದ ಮೂಲಕ ಕೆಂಪೇಗೌಡ ಏರ್‌ಪೋರ್ಟ್‌ಗೆ 13 ಮಂದಿ ಕನ್ನಡಿಗರು ಆಗಮಿಸಿದ್ದಾರೆ. ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ವಿವಿಧೆಡೆ ಸಿಲುಕಿದ್ದ 13 ಮಂದಿ ಕನ್ನಡಿಗರನ್ನು ರಕ್ಷಣೆ ಮಾಡಲಾಗಿತ್ತು. ಇದೀಗ 13 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗಿದೆ.

