ಬೆಂಗಳೂರು : ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿ ಕಾವೇರಿ ಜಲ್ಲಿ ಕ್ರಷರ್‌ ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ತಾವರೆಕೆರೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತರೆಲ್ಲರೂ ಸಹ ದಿನಗೂಲಿ ಕಾರ್ಮಿಕರಾಗಿದ್ದು, ಕ್ರಷರ್‌ ಬಳಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ. ಗುರುವಾರ ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕವೂ ಎದುರಾಗಿದೆ.

ಗಾಯಾಳುಗಳನ್ನು ಆರ್‌ಆರ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಳಗ್ಗೆ 7.30 ರ ಸುಮಾರಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ಇಟಾಚಿ ಮೇಲಿನಿಂದ ಹಠಾತ್ತಾಗಿ ಬಂಡೆ ಕುಸಿದು ಬಿದ್ದಿತ್ತು. ಬಂಡೆಯ ಕೆಳಗೆ ಇನ್ನಷ್ಟು ಕಾರ್ಮಿಕರು ಹುಗಿದುಹೋಗಿರುವ ಆತಂಕವೂ ಸಹ ವ್ಯಕ್ತವಾಗಿದೆ.

ಮೃತರ ಪೈಕಿ ಇಬ್ಬರನ್ನು ಹೊರತು ಪಡೆಸಿ ಮಿಕ್ಕವರೆಲ್ಲರೂ ಬಿಹಾರ ಮೂಲದವರೆಂದು ತಿಳಿದುಬಂದಿದೆ. ಈ ಕ್ರಷರ್‌ ಆನಂದ ಸ್ವಾಮಿ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಪೊಲೀಸರು ಮಾಲಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ನಿರೀಕ್ಷೆಯಿದೆ. ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.