ಬೆಂಗಳೂರು: ಡಿ.ಕೆ. ಶಿವಕುಮಾರ್ ನಾಳೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸ್ ಇಲಾಖೆಯು ಪರ್ಯಾಯ ಮಾರ್ಗಗಳ ವ್ಯವಸ್ಥೆಯನ್ನು ಮಾಡಿದೆ.

ಕಬ್ಬನ್ ರಸ್ತೆಯಿಂದ CTO ಜಂಕ್ಷನ್ ಮತ್ತು ಲೋಕ ಭವನ ಕಡೆಗೆ ಹೋಗುವ ವಾಹನಗಳು BRV ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಶಿವಾಜಿನಗರ ಮತ್ತು ಬಾಲೇಕುಂದ್ರಿ ವೃತ್ತದ ಕಡೆಗೆ ಅಥವಾ ಎಡ ತಿರುವು ಪಡೆದು ಅನಿಲ್ ಕುಂಬ್ಳೆ ಜಂಕ್ಷನ್ ಹಾಗೂ ಎಂ.ಜಿ. ರಸ್ತೆ ಮುಖಾಂತರ ಸಂಚರಿಸಬಹುದು.

ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಬರುವ ವಾಹನಗಳಿಗೆ ಬಾಲೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದ್ದು, ಕ್ವೀನ್ಸ್ ಜಂಕ್ಷನ್ ಕಡೆಯಿಂದ ಲೋಕ ಭವನದ ಕಡೆಗೆ ಹೋಗುವ ವಾಹನಗಳು ಅನಿಲ್ ಕುಂಬ್ಳೆ ಜಂಕ್ಷನ್ ಹಾಗೂ BRV ಜಂಕ್ಷನ್ ಮಾರ್ಗವಾಗಿ ಚಲಿಸಬೇಕಾಗುತ್ತದೆ.

ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿ ಬೋರ್ಡ್ ಜಂಕ್ಷನ್‌ಗೆ ಹೋಗುವ ವಾಹನಗಳು ನೃಪತುಂಗ ರಸ್ತೆಯನ್ನು ಬಳಸಬೇಕಾಗಿದ್ದು, ಇದೇ ಕೆ.ಆರ್. ಸರ್ಕಲ್ ಕಡೆಯಿಂದ ಕಬ್ಬನ್ ಪಾರ್ಕ್ ಒಳಗಿನ ಮುಖಾಂತರ ಸಿದ್ದಲಿಂಗಯ್ಯ ಜಂಕ್ಷನ್ ತಲುಪಿ ವಿಠ್ಠಲ್ ಮಲ್ಯ ರಸ್ತೆ ಕಡೆಗೆ ಸಾಗಲು ಅವಕಾಶ ನೀಡಲಾಗಿದೆ.

ರೇಸ್‌ಕೋರ್ಸ್ ರಸ್ತೆಯ ಟ್ರೈಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಅಲ್ಲಿಂದ ಎಡ ತಿರುವು ಪಡೆದು ಮುಂದುವರಿಯಬಹುದು. ಇನ್ನು ಆಶೀರ್ವಾದ ವೃತ್ತ ಹಾಗೂ ಎಂ.ಜಿ. ರಸ್ತೆ ಕಡೆಯಿಂದ ಹೆಬ್ಬಾಳ ಕಡೆಗೆ ಪ್ರಯಾಣಿಸುವವರು BRV ಜಂಕ್ಷನ್, ಶಿವಾಜಿನಗರ ಬಸ್ ನಿಲ್ದಾಣ, ಬಾಲೇಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಮ್ ರಸ್ತೆ ಮತ್ತು ವಸಂತನಗರದ ಮುಖಾಂತರ ಸಂಚರಿಸಲು ಸೂಚಿಸಲಾಗಿದೆ.