ಚನ್ನಪಟ್ಟಣ: ಐವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದ ಕಾರಿನ ಚಕ್ರ ತಾಲ್ಲೂಕಿನ ಮುದುಗೆರೆ ಸಮೀಪ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಫೋಟಗೊಂಡು ಪಲ್ಟಿಯಾಗಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕಾರು ಚಾಲಕ ಆನಂದ ಎಂಬುವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ರೇವಣ್ಣ, ರಾಜು, ಪ್ರಕಾಶ್ ಹಾಗೂ ಕೃಷ್ಣ ಅವರಿಗೆ ಗಾಯಗಳಾಗಿದ್ದು ಸಮೀಪದ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಯನಿಮಿತ್ತ ಐವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ವೇಗವಾಗಿ ಹೋಗುತ್ತಿದ್ದ ಕಾರಿನ ಚಕ್ರ ಮುದುಗೆರೆ ಬಳಿ ಸ್ಫೋಟಗೊಂಡಿದೆ. ಈ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡ ಕಾರು, ಮೈಸೂರು ಕಡೆಯ ರಸ್ತೆಗೆ ಹಾರಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಅಪಘಾತದ ತೀವ್ರತೆಗೆ ಚಾಲಕ ಆನಂದ್ ಅವರಿಗೆ ಗಂಭೀರ ಗಾಯಗಳಾದವು. ಬಿಇಒಗಳು ಸಹ ಗಾಯಗೊಂಡರು. ತಕ್ಷಣ ಎಲ್ಲರನ್ನೂ ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆಗೆ ಸೇರಿಸಲಾಯಿತು.