ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳು ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರನ್ನ ಫಾಲೋ ಮಾಡಿ ಕಿರುಕುಳ ಕೊಟ್ಟಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳಾದ ತೇಜಸ್, ಜಗನ್ನಾಥ್, ಕಣ್ಣನ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಉಳಿದವರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ರಾತ್ರಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನ ಇಂಡಿಕೇಟರ್ ಒಂದು ಬದಿಗೆ ಹಾಕಿ ಮತ್ತೊಂದು ಬದಿಗೆ ಕಾರು ಚಲಿಸಿದೆ. ಇದಕ್ಕಾಗಿ ಎರಡ್ಮೂರು ಬೈಕ್ಗಳಲ್ಲಿದ್ದ ನಾಲ್ಕೈದು ಆರೋಪಿಗಳು ಕಿರಿಕ್ ಮಾಡಿದ್ದಾರೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಚಾಲನೆಯಲ್ಲಿದ್ದ ಕಾರಿನ ಡೋರ್ ಓಪನ್ ಮಾಡಲು ಆರೋಪಿಗಳು ಮುಂದಾಗಿದ್ದಾರೆ.
ಆತಂಕಗೊಂಡ ಮಹಿಳೆಯರು ಕಿರುಚಿಕೊಂಡು ಕಾರನ್ನು ಇನ್ನೂ ಸ್ಪೀಡ್ ಆಗಿ ಚಾಲನೆ ಮಾಡಿದ್ದಾರೆ. ಆರೋಪಿಗಳು ಚೇಸ್ ಮಾಡಿಕೊಂಡು ಬಂದು ಮಹಿಳೆಯರಿಗೆ ದಮ್ಕಿ ಹಾಕುತ್ತಲೇ ಇದ್ದರು. ಮಡಿವಾಳದಿಂದ, ಸೆಂಟ್ ಜಾನ್ಸ್, ಅಲ್ಲಿಂದ ಕೋರಮಂಗಲವರೆಗೂ ಕಿಡಿಗೇಡಿಗಳು ಫಾಲೋ ಮಾಡಿದ್ದರು.
ಈ ವೇಳೆ ಸಹಾಯಕ್ಕಾಗಿ 112 ಫೋನ್ ಮಾಡಿದ್ದ ಮಹಿಳೆಯರು ಕಾರು ಎಲ್ಲೆಲ್ಲಿ ಹೋಗುತ್ತಿದೆ ಎಂದು ಎಲ್ಲ ಮಾಹಿತಿಯನ್ನು ನಿರಂತರವಾಗಿ ಪೊಲೀಸರಿಗೆ ತಿಳಿಸುತ್ತಿದ್ದರು.
ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸುತ್ತಿದ್ದಂತೆ ದ್ವಿಚಕ್ರ ವಾಹನಗಳಲ್ಲಿ ಫಾಲೋ ಮಾಡ್ತಿದ್ದ ಕೆಲ ಪುಂಡರು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.