ಬೆಂಗಳೂರು : ನಟ ದರ್ಶನ್ ವಿರುದ್ಧ ಮಾತನಾಡಿದ್ದಕ್ಕೆ ನಟಿ ರಮ್ಯಾಗೆ ಸೋಶಿಯಲ್ ಮೀಡಿಯಾ ಮೂಲಕ ಬೆದರಿಕೆ, ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಇದುವರೆಗೆ ಒಟ್ಟು 5 ಜನರ ಬಂಧನವಾಗಿದೆ.
ಬಂಧಿತ ಆರೋಪಿಯನ್ನು ಕೊಪ್ಪಳ ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು.
ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಸಿಡಿದೆದ್ದ ನಟಿ ರಮ್ಯಾ ಅಶ್ಲೀಲ ಮೆಸೇಜ್ ಕಳುಹಿಸಿದ್ದ 43 ಖಾತೆಗಳನ್ನು ಬಹಿರಂಗಗೊಳಿಸಿ, ಅವರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು. ನಟಿ ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.
ಅದರಂತೆ ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದುವರೆಗೆ ಐದು ಜನರನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
ಈ ಹಿಂದೆ ನಟಿ ರಮ್ಯಾಗೆ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ್ದ, ಗಂಗಾಧರ, ರಾಜೇಶ್, ಭುವನ್, ಓಬಣ್ಣ ಎಂಬುವವರನ್ನು ಬಂಧಿಸಲಾಗಿತ್ತು, ಇದೀಗ ಕೊಪ್ಪಳ ಮೂಲದ ಮಂಜುನಾಥ್ ಎಂಬುವವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

