ಬೆಂಗಳೂರು: ಹಾಡಹಗಲೇ ಮೊಬೈಲ್‌ ಕಸಿದು ಪರಾರಿಯಾಗಲು ಯತ್ನಿಸಿದ ವೇಳೆ ಅಲ್ಲೇ ಇದ್ದ ಕಾರ್ಮಿಕನ್ನೊಬ್ಬ ಸಮಯಪ್ರಜ್ಞೆಯಿಂದ ತನ್ನ ಗಾಡಿಯ ಮೇಲಿದ್ದ ಮೂಟೆಯನ್ನು ಕಳ್ಳರ ಮೇಲೆ ಎಸೆದು ಕಳ್ಳರನ್ನು ಹೊಡೆದೋಡಿಸಿದ್ದಾನೆ. ಆದರೆ, ಆತಂಕಗೊಂಡು ಓಡುವ ವೇಳೆ ಕಳ್ಳ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಜುನೈದ್‌ ಮೃತಪಟ್ಟ ಕಳ್ಳ. ಆತನ ಸಹಚರ ಅರ್ಬಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಳೆದ ಸೋಮವಾರ ಕಬ್ಬನ್‌ಪೇಟೆಯ ರಸ್ತೆಯಲ್ಲಿ ಪಾದಚಾರಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಮೃತ ಜುನೈದ್‌ ಮತ್ತು ಅರ್ಬಾಜ್‌ ಬೈಕ್‌ನಲ್ಲಿ ಹಿಂಬಾಲಿಸಿದ್ದರು. ಪಾದಚಾರಿಯ ಬಳಿ ಬರುತ್ತಿದ್ದಂತೆ ಆತನಕ ಕೈಲಿದ್ದ ಮೊಬೈಲ್‌ ಕಸಿದು ಬೈಕ್‌ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದರು.

ಆ ವೇಳೆ ಮೊಬೈಲ್‌ ಕಳೆದುಕೊಂಡ ವ್ಯಕ್ತಿ ಜೋರಾಗಿ ಮೊಬೈಲ್‌ ಕಳ್ಳ ಎಂದು ಕೂಗಿದ್ದು, ಅದೇ ರಸ್ತೆಯಲ್ಲಿ ತಲೆಯ ಮೇಲೆ ಭಾರವಾದ ಮೂಟೆ ಹೊತ್ತು ಬರುತ್ತಿದ್ದ ಕಾರ್ಮಿಕನ್ನೊಬ್ಬ ಇದನ್ನು ಗಮನಿಸಿ ಕಳ್ಳರು ಬೈಕ್‌ನಲ್ಲಿ ತನ್ನ ಸನಿಹಕ್ಕೆ ಬರುತ್ತಿದ್ದಂತೆ ತಲೆ ಮೇಲಿದ್ದ ಮೂಟೆಯನ್ನು ಅವರ ಬೈಕ್‌ ಎಸೆದಿದ್ದ.

ಮೂಟೆ ಬಿದ್ದ ರಭಸಕ್ಕೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಕಳ್ಳರು, ಇನ್ನೇನು ತಮ್ಮನ್ನು ಸಾರ್ವಜನಿಕರು ಹಿಡಿಯುತ್ತಾರೆ ಎಂದು ಆತಂಕಗೊಂಡು ಕದ್ದ ಮೊಬೈಲ್‌, ಬೈಕ್‌ ಅಲ್ಲೇ ಬಿಟ್ಟು ಕಬ್ಬನ್‌ಪೇಟೆಯ ಗಲ್ಲಿಗಳಲ್ಲಿ ಓಡಿಹೋಗಿದ್ದರು. ಸ್ವಲ್ಪ ದೂರ ಓಡಿ ಬಂದಾಗ ಕಳ್ಳ ಜುನೈದ್‌, ತೀವ್ರವಾಗಿ ಆಯಾಸಕ್ಕೊಳಗಾಗಿದ್ದ. ನಂತರ ಆತ ಕಬ್ಬನ್‌ಪೇಟೆಯ ರಸ್ತೆಯ ಫುಟ್‌ಪಾತ್‌ ಮೇಲೆ ದಣಿವಾರಿಸಿಕೊಳ್ಳುತ್ತಿ ದ್ದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜುನೈದ್‌, ಜೋರಾಗಿ ಓಡಿದಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ. ಹಲಸೂರು ಗೇಟ್‌ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರ್ಮಿಕ ತನ್ನ ತಲೆಯ ಮೇಲಿದ್ದ ಮೂಟೆಯನ್ನು ಕಳ್ಳರ ಬೈಕ್‌ ಮೇಲೆ ಎಸೆಯುವ ದೃಶ್ಯಗಳು, ಕಳ್ಳರು ದ್ವಿಚಕ್ರವಾಹನದಿಂದ ಕೆಳಗೆ ಬಿದ್ದು ಓಡುವುದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

— Karnataka Portfolio (@karnatakaportf) June 19, 2026