ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ, ನಾಯಕತ್ವ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಸಿಎಂ-ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ದೆಹಲಿಗೆ ಸಿಎಂ ಹೋಗಿರೋದು ರಾಜ್ಯಸಭೆ ಎಲೆಕ್ಷನ್ ಅಭ್ಯರ್ಥಿಯ ಆಯ್ಕೆ ವಿಚಾರಕ್ಕೆ. ಎಂಎಲ್‌ಸಿ ಎಲೆಕ್ಷನ್ ಬಗ್ಗೆ ಚರ್ಚೆ, ಕೇಂದ್ರದ ವಿಷಯಗಳ ಕುರಿತು ಕೇಂದ್ರ ಸಚಿವರ ಭೇಟಿಗೆ ಹೋಗಿದ್ದಾರೆ. ಸರ್ಕಾರ ಮತ್ತು ಪಕ್ಷದ ಕೆಲಸದ ಹಿನ್ನೆಲೆ ದೆಹಲಿಗೆ ಹೋಗಿದ್ದಾರೆ ಎಂದರು.

ಬಿಜೆಪಿ ಅವರು ಸುಮ್ಮನೆ ಟೀಕೆ ಮಾಡೋದು ಬೇಡ. ಬಿಜೆಪಿ ಸರ್ಕಾರ ಇದ್ದಾಗ ಬಿಜೆಪಿ ಮಂತ್ರಿಗಳು ದೆಹಲಿಗೆ ಹೋಗಿಲ್ಲವಾ? ಬಿಜೆಪಿಯವರು ಹಾಗೆ ಮಾತಾಡಬಾರದು. ಟೀಕೆ ಟಿಪ್ಪಣಿ ಮಾಡೋವಾಗ ಜವಾಬ್ದಾರಿಯಿಂದ ಮಾಡಬೇಕು. ಪಕ್ಷದ ಆಂತರಿಕ ವಿಚಾರದ ಬಗ್ಗೆ ಯಾರೂ ಮಾತಾಡಬಾರದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತಾಡೋದು ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ವಿಚಾರ ಇಲ್ಲ. ಸಿಎಂ ಬದಲಾವಣೆ ಅಂತ ಯಾರು ಹೇಳಿದ್ದಾರೆ? ನೀವೆ ಸೃಷ್ಟಿ ಮಾಡೋದು. ಶಾಸಕರಿಗೆ ಅಭಿಪ್ರಾಯ ಇದೆ, ಆದ್ರೆ ಭಿನ್ನಾಭಿಪ್ರಾಯ ಇಲ್ಲ. ಸಿಎಂ ಬದಲಾವಣೆ ವಿಚಾರ ಇಲ್ಲ. ಸಂಪುಟ ಪುನರ್ ರಚನೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.