ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು ನಿಧನರಾಗಿದ್ದಾರೆ. ಅಪ್ಪಟ ಕನ್ನಡ ಭಾಷಾ ಪ್ರೇಮಿಯನ್ನು ಕಳೆದುಕೊಂಡ ಇಡೀ ಕರುನಾಡು ಕಂಬನಿ ಮಿಡಿದಿದೆ.
ಅಪರ್ಣಾ ಅವರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ ಮೇಲೆ ಆಘಾತದ ಬಗ್ಗೆ ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಇಹಲೋಕದ ವ್ಯಾಪಾರವನ್ನ ತ್ಯಜಿಸಿ ಅಪರ್ಣಾ ಸ್ವರ್ಗಸ್ತಳಾಗಿದ್ದಾಳೆ. ಕಳೆದ 2 ವರ್ಷಗಳಿಂದ ನಾನು ಮತ್ತು ಅವಳು ಅವಳ 4ನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಅನ್ನು ಸೆಣಸುತ್ತಾ ಇದ್ವಿ. ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ. ಅತ್ಯಂತ ವಿಷಾಧದಿಂದ ಈ ಮಾತನ್ನ ನಿಮ್ಮಗಳ ಮುಂದೆ ಇಡುತ್ತಿದ್ದೇನೆ. ಅಪರ್ಣಾಳಿಗೆ ಬರುವ ಅಕ್ಟೋಬರ್ಗೆ 58 ವರ್ಷ ತುಂಬುತ್ತಿತ್ತು. ಎಲ್ಲರ ಪ್ರೀತಿ, ಸಹಕಾರ ಒಡನಿರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.
ಅಪರ್ಣಾ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ನಾಲ್ಕನೇ ಹಂತದಲ್ಲಿದ್ದ ಅಪರ್ಣಾ ಅವರ ಶ್ವಾಸಕೋಶದ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ಅವರು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ (ಜುಲೈ ೧೧) 9:45ಕ್ಕೆ ನಿಧನಾರಾಗಿದ್ದಾರೆ.

