ಬೆಂಗಳೂರು: ರಾಜ್ಯ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದು, ಜಾತಿ ಒಡೆಯುವ ಕಾರ್ಯ ಮಾಡುತ್ತಿಲ್ಲ, ಮಾಡುವುದೂ ಇಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ಸಮಾಜದ ಹಿರಿಯರಾದ ಪ್ರಭಾಕರ ಕೋರೆ, ರೇಣುಕಾಚಾರ್ಯ, ವೀರಣ್ಣ ಚರಂತಿ ಮಠ ಅವರೊಂದಿಗೆ 19 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ವೀರಶೈವ-ಲಿಂಗಾಯತ ಏಕತಾ ಸಮಾವೇಶ ಕುರಿತಂತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸೆ. 22 ರಿಂದ 7 ನೇ ಅಕ್ಟೋಬರ್ ವರೆಗೆ ರಾಜ್ಯದಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಈ ಕುರಿತಂತೆ ಮಹಾಸಭಾವತಿಯಿಂದ ಹಲವು ಸಭೆಗಳು ನಡೆದಿವೆ. ಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಹಿರಿಯ ಉಪಾಧ್ಯಕ್ಷನಾದ ನನ್ನ ಅಧ್ಯಕ್ಷತೆಯಲ್ಲಿ ಶಾಸಕರ, ಸಮಾಜದ ಮುಖಂಡರ ಸಭೆಗಳನ್ನು ನಡೆಸಲಾಗಿದೆ. ಲಿಂಗಾಯತ-ವೀರಶೈವ ಎಲ್ಲರೂ ಒಂದೇ ಎಂಬ ಸ್ಪಷ್ಟ ಸಂದೇಶ ನೀಡಲು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಆಯೋಜಿಸಲಾಗಿದೆ ಎಂದರು.
ಕೆಲವರು ಸರ್ಕಾರ ಧರ್ಮ ಒಡೆಯುತ್ತಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಹಿಂದೆಯೂ ಧರ್ಮ ಒಡೆಯುವ ಕಾರ್ಯ ಮಾಡಿಲ್ಲ, ಇಂದೂ ಮಾಡುತ್ತಿಲ್ಲ, ಮುಂದೆಯೂ ಮಾಡುವುದಿಲ್ಲ. ಮೊದಲೇ ಸಮಾಜದ ಜನರು ಗೊಂದಲದಲ್ಲಿದ್ದು, ರಾಜಕೀಯ ಲಾಭಕ್ಕಾಗಿ ಯಾರೂ ಮತ್ತಷ್ಟು ಗೊಂದಲ ಮೂಡಿಸಬಾರದು ಎಂದರು.

