ಬೆಂಗಳೂರು : ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದಲೇ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಕರಗದ ಆಕರ್ಷಣೀಯ ಕೇಂದ್ರಬಿಂದು ಉತ್ಸವ ಏಪ್ರಿಲ್ 14ಕ್ಕೆ ನಡೆಯಲಿದೆ.
ಶುಕ್ರವಾರ ರಾತ್ರಿ 10 ಗಂಟೆಗೆ ಕರಗದ ಆಚರಣೆಗಳು ಶುರುವಾಗಲಿದ್ದು. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ದೇವಿ ದರ್ಶನಕ್ಕೆ ಜನರು ಕಾತುರರಾಗಿದ್ದಾರೆ.
ಐತಿಹಾಸಿಕ ಕರಗ ಮಹೋತ್ಸವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ.ಏಪ್ರಿಲ್ 4 ರಂದು ರಥೋತ್ಸವ ಮತ್ತು ಧ್ವಜಾರೋಹಣ ನಡೆಯಲಿದೆ. ಏ.5 ರಿಂದ ಏ.8 ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಇರಲಿದೆ.
ಏ.10 ರ ಗುರುವಾರ ಹಸಿ ಕರಗ, ಏ.11 ರಂದು ಹೊಂಗಲು ಸೇವೆ, ಏ.12 ಶನಿವಾರದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ, ಏ.13 ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ, ಏ.14 ರ ಸೋಮವಾರ ವಸಂತೋತ್ಸವ ಧ್ವಜಾರೋಹಣ ಇರಲಿದೆ.
ಕರಗ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಪೊಲೀಸರು ಪ್ರತಿನಿತ್ಯ ಗಸ್ತು ತಿರುಗಲಿದ್ದು , ಏಪ್ರಿಲ್ 14ಕ್ಕೆ ದೊಡ್ಡ ಮಟ್ಟದಲ್ಲಿ ಬಂದೋಬಸ್ತ್ ನಿಯೋಜನೆ ಮಾಡಲು ಸಿದ್ಧತೆ ನಡೆದಿದೆ.

