ಬೆಂಗಳೂರು: ಸಿದ್ದರಾಮಯ್ಯ ಅವರು ಆರ್ಥಿಕ ಸುಸ್ಥಿರತೆ ಇಲ್ಲದ, ಕೆಟ್ಟುಹೋದ ಲಾರಿಯಂತಿರುವ ಆಡಳಿತವನ್ನು ಬಿಟ್ಟು ಹೋಗಿದ್ದಾರೆ. ಇವೆಲ್ಲದರ ಪರಿಣಾಮ ಡಿ.ಕೆ.ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಜನರ ಮೇಲೆ ಇನ್ನಷ್ಟು ತೆರಿಗೆಗಳ ಬರೆ ಎಳೆಯುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಳೇ ಲಾರಿ ಇದ್ದಂತೆ. ಈಗ ಲಾರಿಯ ಚಾಲಕ ಬದಲಾಗಿದ್ದಾನೆಯೇ ಹೊರತು ಲಾರಿ ಬದಲಾಗಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮೂರು ವರ್ಷ ನಿರಂತರ ಸಾಲ ಮಾಡಿ ಆಡಳಿತವನ್ನು ಶಿವಕುಮಾರ್‌ಗೆ ನೀಡಿದ್ದಾರೆ. ₹4 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ, ₹7.64 ಲಕ್ಷ ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಈ ವರ್ಷದ ಬಜೆಟ್‌ನ ಕೊರತೆ ₹94,428 ಕೋಟಿ ಆಗಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ’ ಎಂದು ಟೀಕಿಸಿದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಗಾಗಿ ₹84,000 ಕೋಟಿ ಖರ್ಚು ಮಾಡುತ್ತಿದ್ದೆವು. ಅವೈಜ್ಞಾನಿಕ ಗ್ಯಾರಂಟಿ ಬಂದ ನಂತರ ಆ ಮೊತ್ತದಲ್ಲಿ ಕಡಿತವಾಗಿದೆ. ಬಿಜೆಪಿ ಇದ್ದಾಗ ಮಿಗತೆ ಬಜೆಟ್‌ ಮಂಡನೆಯಾಗಿದ್ದರೆ, ಕಾಂಗ್ರೆಸ್‌ ಬಂದ ನಂತರ ಕೊರತೆ ಬಜೆಟ್‌ ಮಂಡಿಸಲಾಗಿದೆ’ ಎಂದರು.

‘ಮೋದಿ ಸರ್ಕಾರ ₹200 ಲಕ್ಷ ಕೋಟಿ ಸಾಲ ಮಾಡಿದ್ದರೂ, ಅದರಲ್ಲಿ ₹170 ಲಕ್ಷ ಕೋಟಿ ರೈಲ್ವೆ, ಸೇತುವೆ, ಹೆದ್ದಾರಿ ಸೇರಿ ದೇಶದ ಮೂಲಸೌಕರ್ಯ ಗಳ ಅಭಿವೃದ್ಧಿಗೆ ಖರ್ಚು ಮಾಡಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿಗೆ ಏನೂ ಖರ್ಚು ಮಾಡಿಲ್ಲ. ಗ್ಯಾರಂಟಿಗಾಗಿ ₹65,000 ಕೋಟಿ ಖರ್ಚು ಮಾಡುವುದನ್ನೇ ದೊಡ್ಡದಾಗಿ ಹೇಳುತ್ತಾರೆ. ಹೆಚ್ಚುವರಿ ತೆರಿಗೆ ಮೂಲಕ ಆ ಮೊತ್ತ ಸರಿದೂಗಿಸಲು ಹೆಣಗಾಡು ತ್ತಿದ್ದಾರೆ ಎಂದರು.