ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ದಾರುಣವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಗ್ಯ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಚಂದ್ರು ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಚೆನ್ನೈ ಮೂಲದ ‘ಎಎಸ್ಆರ್ ಟ್ರೇಡರ್ಸ್’ ಎಂಬ ಸಂಸ್ಥೆಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
=ಆಸ್ಪತ್ರೆ ಆವರಣದಲ್ಲಿದ್ದ ಹಳೆ ಕಟ್ಟಡಗಳನ್ನು ತೆರವುಗೊಳಿಸಿ, ಅಲ್ಲಿನ ಕಟ್ಟಡ ತ್ಯಾಜ್ಯವನ್ನು (ಕಸ ಹಾಗೂ ಕಲ್ಲು-ಮಣ್ಣು) ವಿಲೇವಾರಿ ಮಾಡುವ ಗುತ್ತಿಗೆಯನ್ನು ಈ ಎಎಸ್ಆರ್ ಸಂಸ್ಥೆ ಪಡೆದುಕೊಂಡಿತ್ತು. ಆದರೆ, ಸಂಸ್ಥೆಯು ಆ ತ್ಯಾಜ್ಯವನ್ನು ಅಲ್ಲಿಂದ ಸಾಗಿಸದೆ ಸ್ಥಳದಲ್ಲೇ ಬಿಟ್ಟು ಹೋಗಿತ್ತು.
ಈ ಹೆಚ್ಚುವರಿ ತ್ಯಾಜ್ಯದ ವಿಪರೀತ ಒತ್ತಡ ತಡೆಯಲಾರದೆ ಏಪ್ರಿಲ್ 30 ರಂದು ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿತ್ತು. ಈ ಭೀಕರ ದುರಂತದಲ್ಲಿ ಏಳು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.
ದುರಂತ ನಡೆದ ತಕ್ಷಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು (CS) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಘಟನೆ ಕುರಿತು ತನಿಖೆ ನಡೆಸಲು ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ತಾಂತ್ರಿಕ ಸಮಿತಿಯು ಇತ್ತೀಚೆಗೆ ಮುಖ್ಯ ಕಾರ್ಯದರ್ಶಿಗಳಿಗೆ ತನಿಖಾ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಗುತ್ತಿಗೆದಾರ ಸಂಸ್ಥೆಯ ನಿರ್ಲಕ್ಷ್ಯ ಎದ್ದು ಕಂಡ ಹಿನ್ನೆಲೆಯಲ್ಲಿ, ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಸ್ ಸೂಚನೆ ನೀಡಿದ್ದರು.
ಮುಖ್ಯ ಕಾರ್ಯದರ್ಶಿಗಳ ಸೂಚನೆ ಬೆನ್ನಲ್ಲೇ ಅಧಿಕಾರಿಗಳು ಗುತ್ತಿಗೆದಾರ ಸಂಸ್ಥೆಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸಿ, ಮೇ 18ರ ಒಳಗೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದರು. ಆದರೆ, ಎಎಸ್ಆರ್ ಸಂಸ್ಥೆಯಿಂದ ಯಾವುದೇ ಪ್ರತ್ಯುತ್ತರ ಬಾರದ ಕಾರಣ, ಸರ್ಕಾರದ ಆದೇಶದ ಮೇರೆಗೆ ಈಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಗುತ್ತಿಗೆ ಸಂಸ್ಥೆಯ ವಿರುದ್ಧ ಕಾನೂನು ಸಮರ ಆರಂಭಿಸಿದ್ದಾರೆ.

