ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಆರೋಪದಡಿ ಹಾಸನದ ಪ್ರಸಿದ್ಧ ದೇವಾಲಯದ ಪೂಜಾರಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ (39) ಬಂಧಿತ ವ್ಯಕ್ತಿ. ಬಾಗಲುಗುಂಟೆ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿದೆ.

ಕೆಲ ದಿನಗಳ ಹಿಂದೆ ಮಹಿಳೆ ನೀಡಿದ ದೂರಿನನ್ವಯ ಬಾಗಲುಗುಂಟೆ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿ ದಯಾನಂದ್‌ನ ಪೊಲೀಸರು ಬಂಧಿಸಿದ್ದಾರೆ.

ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಪೂಜಾರಿ, ಬಳಿಕ ಮಹಿಳೆಯನ್ನು ಕರೆಸಿಕೊಂಡು ಆತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ದಯಾನಂದ್ ಅರಸೀಕೆರೆ ಬಳಿಯ ಗೊಲ್ಲರಹಳ್ಳಿ ಕುರುಗುಂದ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದಾನೆ. ಮಹಿಳೆ ಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ ಪರಿಚಯ ಮಾಡಿಕೊಂಡಿದ್ದ.

ಶಾಸ್ತ್ರ ಹೇಳುತ್ತಿದ್ದ ಪೂಜಾರಿ ದಯಾನಂದ್‌ಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಮಹಿಳೆಗೆ ಕಂಟಕವಿದೆ‌ ಹೇಳಿ ಆಗಾಗ ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಒಂದು‌ ಲಕ್ಷಕ್ಕಿಂತ ಹೆಚ್ಚು ಹಣ ಮಹಿಳೆಯಿಂದ ಪಡೆದಿದ್ದ ಎನ್ನಲಾಗಿದೆ.