ಬೆಂಗಳೂರು: ತಾಂತ್ರಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೇ 31ರ ಭಾನುವಾರ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಬಿಎಂಆರ್‌ಸಿಎಲ್ ತಿಳಿಸಿದ್ದು, ನಾಳೆ ಬೆಳಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಅತ್ತಿಗುಪ್ಪೆ ಮತ್ತು ವಿಜಯನಗರ ನಿಲ್ದಾಣಗಳ ನಡುವೆ ಕಾಮಗಾರಿ ನಡೆಯಲಿದೆ. ಈ 2 ಗಂಟೆಗಳ ಅವಧಿಯಲ್ಲಿ ದೀಪಾಂಜಲಿನಗರದಿಂದ ಕೆ.ಎಸ್.ಆರ್ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಆದರೆ, ಚಲ್ಲಘಟ್ಟದಿಂದ ಮೈಸೂರು ರಸ್ತೆವರೆಗೆ ಹಾಗೂ ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್ (ಕಾಡುಗೋಡಿ) ವರೆಗಿನ ಮಾರ್ಗದಲ್ಲಿ ರೈಲುಗಳು ಎಂದಿನಂತೆ ಚಲಿಸಲಿವೆ. ಹಸಿರು ಮತ್ತು ಹಳದಿ ಮಾರ್ಗಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬೆಳಗ್ಗೆ 9:00 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಸಂಚಾರ ಯಥಾಸ್ಥಿತಿಗೆ ಮರಳಲಿದೆ. ಈ ಅವಧಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ಬಸ್ ಅಥವಾ ಆಟೋಗಳ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕೋರಲಾಗಿದೆ.

ಭಾನುವಾರ ಬೆಳಗ್ಗೆ ಆರು ಮುಕ್ಕಾಲು ಅಥವಾ ಏಳು ಗಂಟೆಯ ನಂತರ ಮೆಜೆಸ್ಟಿಕ್ ಮತ್ತು ದೀಪಾಂಜಲಿನಗರ ನಡುವೆ ಪ್ರಯಾಣಿಸಬೇಕಿದ್ದಲ್ಲಿ, ಬಿಎಂಟಿಸಿ ಬಸ್ ಅಥವಾ ಆಟೋಗಳಂತಹ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.