ಬೆಂಗಳೂರು: ನಗರದ ವಿವಿಧ ರಸ್ತೆಗಳಲ್ಲಿ ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆತನ ಮನೆಯನ್ನು ಪರಿಶೀಲಿಸಿದಾಗ ಆಯುಧ ಹಾಗೂ ಮೊಬೈಲ್ ಕಳ್ಳತನದ ಜಾಲವೂ ಪತ್ತೆಯಾಗಿದೆ.
ಅಕ್ಬರ್ ಶರೀಫ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಆರೋಪಿ ಅಕ್ಬರ್ ಶರೀಫ್ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈತನ ಚಲನವಲನ ಗಮನಿಸಿ ಅನುಮಾನಗೊಂಡ ಬ್ಯಾಟರಾಯನಪುರ ಪೊಲೀಸರು, ತಕ್ಷಣ ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದರು. ಆತನ ಬೈಕ್ ಅನ್ನು ತಪಾಸಣೆ ನಡೆಸಿದಾಗ ಅದರಲ್ಲೇ ಐದು ಮಾರಕಾಸ್ತ್ರಗಳು ಪತ್ತೆ ಆಗಿದ್ದವು.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು. ಆತನ ಮನೆಯಲ್ಲಿ ಶೋಧ ನಡೆಸಿದಾಗ ಅಡಗಿಸಿಟ್ಟಿದ್ದ ವಿವಿಧ ಬಗೆಯ 17 ಮಾರಕಾಸ್ತ್ರಗಳು, 230 ಮೊಬೈಲ್ ಫೋನ್‌ಗಳು ಹಾಗೂ 700 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಇವೆಲ್ಲವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
‘ಅಕ್ಬರ್ ಶರೀಫ್ ಬ್ಯಾಟರಾಯನಪುರ ರೈಲ್ವೆ ಹಳಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ. ಗಾಂಜಾ ಮಾರಾಟ ಮಾಡುವಾಗ ಯಾರಾದರೂ ಗಲಾಟೆ ಮಾಡಿದರೆ ತನ್ನ ರಕ್ಷಣೆಗಾಗಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ಮೊಬೈಲ್‌ಗಳನ್ನು ಎಲ್ಲಿ ಕಳ್ಳತನ ಮಾಡಿದ್ದ ಎಂಬುದರ ಪತ್ತೆಗೆ ಸಿಸಿಬಿ ಪೊಲೀಸರು ನೆರವು ಪಡೆಯಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎನ್. ಯತೀಶ್ ಹೇಳಿದರು.
ಗಾಂಜಾ ಖರೀದಿಸಲು ಬರುತ್ತಿದ್ದ ಗ್ರಾಹಕರು ಮೊಬೈಲ್‌ಗಳನ್ನು ಅಡಮಾನ ಇಟ್ಟಿದ್ದರೇ ಅಥವಾ ಆರೋಪಿಯೇ ಕಳ್ಳತನ ಮಾಡಿದ್ದೇ ಎಂಬ ಆಯಾಮದಲ್ಲೂ ತನಿಖೆ ಸಾಗುತ್ತಿದೆ ಎಂದು ಹೇಳಿದರು.
‘ಗಾಂಜಾ ಪೂರೈಸುತ್ತಿದ್ದ ಆರೋಪದ ಮೇಲೆ 2024ರಲ್ಲಿ ಅಕ್ಬರ್ ಶರೀಫ್‌ನ ತಾಯಿ ಮೆಹರ್ ಉನ್ನಿಸಾರನ್ನು ಬಂಧಿಸಲಾಗಿತ್ತು. 45 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು’ ಎಂದು ಮೂಲಗಳು ಹೇಳಿವೆ.

