ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ದಾಖಲಾಗಿದ್ದ ಎರಡು ಪ್ರಕರಣದಲ್ಲೂ ಎಂಎಲ್‌ಸಿ ಸೂರಜ್ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಒಂದು ತಿಂಗಳ ಜೈಲು ವಾಸದ ಬಳಿಕ ಬಿಡುಗಡೆಯಾಗಿದ್ದಾರೆ.
ಮಂಗಳವಾರ ಅಪರಾಹ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ 2 ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಹೊಳೆನರಸೀಪುರ ಟೌನ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮೊದಲಿಗೆ ಸೂರಜ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿತ್ತು. ಬಳಿಕ ಸೋಮವಾರ ಎರಡನೇ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನು ನೀಡಿತ್ತು.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 3ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಸಿಐಡಿ ಕಸ್ಟಡಿ ಮುಕ್ತಾಯಗೊಂಡ ನಂತರ 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಲಾಗಿತ್ತು.
ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದರು. ಜೂನ್ 23ರಂದು ಬಂಧನವಾಗಿದ್ದ ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಸೇರಿದ್ದರು. ಪ್ರಕರಣ ನಡೆದು 30 ದಿನಗಳ ನಂತರ ಈಗ ಸೂರಜ್ ಹೊರ ಬಂದಿದ್ದಾರೆ.

