ಬೆಂಗಳೂರು : ನಾವಿದ್ದರೆ ಬೆಂಗಳೂರು. ಹಾಗೇನಾದರೂ ನಾವೆಲ್ಲರೂ ಬೆಂಗಳೂರು ಬಿಟ್ಟು ಹೋದರೆ, ಇಡೀ ಊರೇ ಖಾಲಿಯಾಗುತ್ತದೆ. ಕೋರಮಂಗಲದ ಪಬ್ಗಳೆಲ್ಲಾ ಖಾಲಿ ಹೊಡೆಯುತ್ತದೆ ಎಂದಿದ್ದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಸುಗಂಧ್ ಶರ್ಮ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಸುಗಂಧ್ ಶರ್ಮ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯದ ಕುರಿತಾಗಿ ಕೆಟ್ಟದಾಗಿ ಮಾತನಾಡಿದ ಬೆನ್ನಲ್ಲಿಯೇ ಆಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ನೀವು ಬೆಂಗಳೂರು ಬಿಟ್ಟು ತೊಲಗಿ ಎಂದು ಸಾಕಷ್ಟು ಮಂದಿ ಹೇಳಿದ್ದರು. ಕರ್ನಾಟಕದ ಬಗ್ಗೆ ಮಾತನಾಡಿದ್ದ ಸುಗಂಧ ಶರ್ಮ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಯುವತಿಗೆ ಬುದ್ದಿ ಕಲಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದವು.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಕೂಡ ಎಚ್ಚೆತ್ತುಕೊಂಡಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಸುಗಂಧ ಶರ್ಮರನ್ನ ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸದ್ಯ ಮಹಿಳೆಯನ್ನ ಫ್ರೀಡಂ ಕಂಪನಿ ಟರ್ಮಿನೇಟ್ ಮಾಡಿದೆ. ಫ್ರೀಡಂ ಕಂಪನಿಗೆ ತೆರಳಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದರ ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಆಕೆ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

