ಬೆಂಗಳೂರು: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕುವ ಇನ್ನೂ ಹೆಚ್ಚಿನ ಕ್ರಮಗಳಿಗೆ ರಾಜ್ಯಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ, ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅಮಾಯಕ ಜನರನ್ನು ಹಾಡುಹಗಲೇ, ತಮ್ಮ ಕುಟುಂಬದವರ ಎದುರು ಕೊಲ್ಲುವುದು ಹ್ಯೇಯಕೃತ್ಯ. ಕಾಶ್ಮೀರದಲ್ಲಿ ಈ ಹಿಂದೆಯೂ ಪುಲ್ವಾಮಾ ಬಾಲಾಕೋಟ್ ಘಟನೆ ನಡೆದಿದ್ದು, ಪುನಃ ಅಂತಹ ಘಟನೆ ಮರುಕಳಿಸಿದೆ. ಇಂತಹ ಘಟನೆ ನಡೆಯಲು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವೂ ಇರಬಹುದು ಎಂದು ತಿಳಿಸಿದರು.

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಹಾಗೂ ಘಟನೆಯಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆಗಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಿಗಳ ತಂಡವನ್ನು ಕೂಡಲೇ ಕಳುಹಿಸಿಕೊಡಲಾಗಿತ್ತು. 175 ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುತ್ತಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.