ಬೆಂಗಳೂರು: ಆರ್‌ ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಬಲಿಯಾದ ಪ್ರಕರಣವು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್​ಸಿಎ) ವಿಶೇಷ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸಿಐಡಿ ತಂಡವು ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕುತ್ತಿದೆ. ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕೆಎಸ್​ಸಿಎ ಅಧ್ಯಕ್ಷರು ಹಾಗೂ ಸಿಬ್ಬಂದಿಯಿಂದ ಸಿಐಡಿ ಅಧಿಕಾರಿಗಳು ಹೇಳಿಕೆ ಪಡೆದುಕೊಳ್ಳಲಿದೆ.

ಸಿಐಡಿ ಎಸ್‌ಪಿ ಶುಭನ್ವಿತಾ ನೇತೃತ್ವದಲ್ಲಿ ಡಿವೈಎಸ್‌ಪಿಗಳಾದ ಪುರುಷೋತ್ತಮ್ ಹಾಗೂ ಗೌತಮ್ ಅವರನ್ನೊಳಗೊಂಡ ತಂಡ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ಆರ್​ಸಿಬಿ ಫ್ರಾಂಚೈಸಿಯ ಮಾರ್ಕೆಟಿಂಗ್​ ವಿಭಾಗದ ಮುಖ್ಯಸ್ಥ​​​​​​​ ನಿಖಿಲ್​ ಸೋಸ್ಲೆ, ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ಡಿಎನ್​ಎ ಎಂಟರ್​ಟೈನ್ಮೆಂಟ್ ಮ್ಯಾನೇಜ್​ಮೆಂಟ್​​ ಕಂಪೆನಿಯ ಪ್ರತಿನಿಧಿಗಳಾದ ಸುನಿಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎರಡು ದಿನ ಸರಕಾರಿ ರಜೆ ಇರುವುದರಿಂದ ಸೋಮವಾರ ಆರೋಪಿಗಳನ್ನು ಬಾಡಿ ವಾರಂಟ್ ಆಧಾರದಲ್ಲಿ ಸಿಐಡಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.