ಹೊಸಕೋಟೆ: ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ಸೋಮವಾರ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, 100 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್‌ ವಶಪಡಿಸಿಕೊಂಡು ₹30 ಸಾವಿರ ದಂಡ ವಸೂಲಿ ಮಾಡಿದರು.

ನಗರದ ವಿವಿಧ ಬಡಾವಣೆ, ಮುಖ್ಯ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಮೇಲೆ ಒಮ್ಮೆಲೇ ಸೋಮವಾರ ಸಂಜೆ 4 ಗಂಟೆಯಿಂದ ತಡ ರಾತ್ರಿವರೆಗೂ ನಗರಸಭೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಪರಿಸರ ಕಾರ್ಯನಿರ್ವಾಹಕ ಎಂಜಿನಿಯರ್‌, ನಗರ ಸಭೆ ಸಿಬ್ಬಂದಿಯನ್ನು ಒಳಗೊಂಡು ಆರು ತಂಡಗಳನ್ನು ರಚಿಸಿ ಏಕಾಏಕಿ ದಾಳಿ ನಡೆಸಲಾಗಿಯಿತು.

ಮುಂದಿನ 15 ದಿನಗಳ ಒಳಗೆ ನಗರದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಇಲ್ಲದಂತೆ ಮಾಡಲು ಅನಿರೀಕ್ಷಿತ ದಾಳಿ ದಂಡ ಹಾಗೂ ಕಟ್ಟುನಿಟ್ಟಿನ ಕಾನೂನು ರೀತಿ ಕ್ರಮ ಕೈಗೊಳ್ಳುವ ಮೂಲಕ ಹೊಸಕೋಟೆ ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಆಶಯ ಇಟ್ಟುಕೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ನೀಲಲೋಚನ ಪ್ರಭು ತಿಳಿಸಿದರು.