ಆನೇಕಲ್: ತಾಲ್ಲೂಕಿನ ತಟ್ಟೆಕೆರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೇಟೆಯಾಡಲು ಪ್ರಯತ್ನಿಸಿದ ಏಳು ಮಂದಿಯನ್ನು ಆನೇಕಲ್‌ ವನ್ಯಜೀವಿ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಯಾದಗಿರಿಯ ನಾಲ್ವರು, ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಮೂವರು ಮಹದೇಶ್ವರ ಅರಣ್ಯ ಪ್ರದೇಶದ ತಟ್ಟೆಕೆರೆ ಸಮೀಪ ಶುಕ್ರವಾರ ರಾತ್ರಿ 1.30ರ ಸುಮಾರಿನಲ್ಲಿ ಬೇಟೆಗೆ ಯತ್ನಿಸಿದ್ದರು. ಅರಣ್ಯ ಇಲಾಖೆಯ ಗಸ್ತು ವೇಳೆಯಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಬೇಟೆಗೆ ಬಳಸಿದ್ದ ಕಾರು ಮತ್ತು ಬ್ಯಾಟರಿ ವಶಕ್ಕೆ ಪಡೆಯಲಾಗಿದೆ ಎಂದು ಆನೇಕಲ್‌ ವನ್ಯಜೀವಿ ವಲಯ ಅರಣ್ಯಾಧಿಕಾರಿ ಬಿ.ಕೆ.ಪುಷ್ಪಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಬನ್ನೇರುಘಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್‌ ಮಾರ್ಗದರ್ಶನದಲ್ಲಿ ಆನೇಕಲ್‌ ವನ್ಯಜೀವಿ ವಲಯ ಅರಣ್ಯಾಧಿಕಾರಿ ಪುಷ್ಪಲತಾ.ಬಿ.ಕೆ, ಉಪ ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌, ಸಿಬ್ಬಂದಿ ಬೀರೇಶ್‌, ಜಗದೀಶ್‌ ಕಾರ್ಯಾಚರಣೆ ನಡೆಸಿದರು.