ಬೆಂಗಳೂರು: 2023 ರಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸಿದ ಪ್ರಯಾಣಿಕರು ಬಿಎಂಟಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಭಾರಿ ದಂಡವನ್ನು ತೆತ್ತಿದ್ದಾರೆ. ಇಷ್ಟೇ ಅಲ್ಲದೇ ಮಹಿಳಾ ಪ್ರಯಾಣಿಕರ ಸೀಟಿನಲ್ಲಿ ಕೂತ ಪುರುಷರು ಕೂಡ ದಂಡ ಕಟ್ಟಿದ್ದಾರೆ. ಅದೆಷ್ಟು ದಂಡ ಕಟ್ಟಿದ್ದಾರೆ? ಎನ್ನುವ ಮಾಹಿತಿ ಇಲ್ಲಿದೆ.
ಬಿಎಂಟಿಸಿ ತನಿಖಾ ತಂಡಗಳು ಡಿಸೆಂಬರ್-2023 ರಲ್ಲಿ ಬಸ್ ನ 16785 ಟ್ರಿಪ್ಗಳನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 3502 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 7,02,340 ರೂ. ದಂಡ ವಸೂಲಿ ಮಾಡಿದ್ದಾರೆ.
ಇನ್ನು ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಂದ ಒಟ್ಟು 34,700 ದಂಡ ವಸೂಲಿ ಮಾಡಲಾಗಿದೆ.
ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಡಿಸೆಂಬರ್-2023 ರ ತಿಂಗಳಲ್ಲಿ 3849 ಪ್ರಯಾಣಿಕರಿಂದ ಒಟ್ಟು 7,37,040 ರೂ. ದಂಡ ವಸೂಲಿ ಮಾಡಲಾಗಿದೆ.