ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆಯುವ ಮೂಲಕ ಬ್ಯಾಂಕ್‌ಗೇ ವಂಚಿಸಿರುವ ಪ್ರಕರಣ ಬೆಂಗಳೂರಿನ ವರ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಖುದ್ದಾಗಿ ಬ್ಯಾಂಕಿನ ಚಿನ್ನದ ಮೌಲ್ಯಮಾಪಕನೇ ಈ ವಂಚನೆ ಜಾಲದ ಸೂತ್ರಧಾರನಾಗಿದ್ದು, ಆತ ಸೇರಿದಂತೆ ನಾಲ್ವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬ್ಯಾಂಕಿನ ವರ್ತೂರು ಶಾಖೆಯ ವ್ಯವಸ್ಥಾಪಕರಾದ ಎಸ್.ಎನ್. ಆದರ್ಶ್ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ, ಬ್ಯಾಂಕಿನ ಗೋಲ್ಡ್ ಅಪ್ರೈಸರ್ ರವಿಕುಮಾರ್ ಮತ್ತು ಆತನಿಗೆ ಸಾಥ್ ನೀಡಿದ ಸಹಚರರಾದ ಮೋಹನರೆಡ್ಡಿ, ಕೇಶವ ಹಾಗೂ ಮಹದೇಶ ಎಂಬುವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಪೊಲೀಸರು ಇವರಿಗಾಗಿ ತೀವ್ರ ಜಾಲ ಬೀಸಿದ್ದಾರೆ.
ಆರೋಪಿ ರವಿಕುಮಾರ್ ಕಳೆದ ಮೂರು ವರ್ಷಗಳಿಂದ ವರ್ತೂರಿನ ಈ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಚಿನ್ನವನ್ನು ಪರಿಶೀಲಿಸುವ ಮೌಲ್ಯಮಾಪಕನಾಗಿ ಕೆಲಸ ಮಾಡುತ್ತಿದ್ದ. ತನಗೆ ಚಿನ್ನದ ಅಡಮಾನದ ನಿಯಮಗಳು ಪೂರ್ಣ ಗೊತ್ತಿದ್ದರಿಂದ, ತನ್ನ ಹೆಸರಿನಲ್ಲಿ ನೇರವಾಗಿ ಸಾಲ ಪಡೆಯಲು ಸಾಧ್ಯವಿಲ್ಲದ ಕಾರಣ ಆತ ಈ ಸಂಚು ರೂಪಿಸಿದ್ದ. ಪರಿಚಯಸ್ಥರಾದ ಮೋಹನರೆಡ್ಡಿ, ಕೇಶವ ಮತ್ತು ಮಹದೇಶ ಅವರಿಗೆ ಕಮಿಷನ್ ಆಮಿಷ ಒಡ್ಡಿದ್ದ. ಅವರ ಹೆಸರಿನಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ದೃಢೀಕರಿಸಿ ಬ್ಯಾಂಕಿನಲ್ಲಿ ಅಡಮಾನ ಇಡುತ್ತಿದ್ದ. ಸಾಲದ ಹಣ ಕೈಗೆ ಬಂದ ತಕ್ಷಣ ಅವರಿಗೆ ಕಮಿಷನ್ ಕೊಟ್ಟು ಉಳಿದ ಸಿಂಹಪಾಲನ್ನು ತಾನೇ ಲಪಟಾಯಿಸುತ್ತಿದ್ದ.
ಬ್ಯಾಂಕಿನ ನಿಯಮಾವಳಿಗಳ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ಬೇರೊಬ್ಬ ಬಾಹ್ಯ ಮೌಲ್ಯಮಾಪಕನಿಂದ ಚಿನ್ನಾಭರಣಗಳ ಮರುಪರಿಶೀಲನೆ ನಡೆಸಲಾಗುತ್ತದೆ. ಈ ವೇಳೆ ಮೋಹನರೆಡ್ಡಿ ಹೆಸರಿನಲ್ಲಿ ಇಡಲಾಗಿದ್ದ ಬಂಗಾರ ನಕಲಿ ಎಂಬುದು ಪತ್ತೆಯಾಗಿದೆ. ಇದರಿಂದ ಸಂಶಯಗೊಂಡ ಬ್ಯಾಂಕ್ ಅಧಿಕಾರಿಗಳು, ಇತರ ಶಾಖೆಗಳಲ್ಲಿದ್ದ ಕೇಶವ ಮತ್ತು ಮಹದೇಶ ಅವರ ಹೆಸರಿನ ಚಿನ್ನದ ಮೂಟೆಗಳನ್ನು ತಪಾಸಣೆಗೆ ಒಳಪಡಿಸಿದಾಗ ಅವುಗಳೂ ನಕಲಿ ಎಂದು ಸಾಬೀತಾಗಿದೆ. ಈ ಮೂಲಕ ಇಡೀ ಗ್ಯಾಂಗ್ ಬ್ಯಾಂಕಿಗೆ ಒಟ್ಟು 16.53 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

