ಪೀಣ್ಯ ದಾಸರಹಳ್ಳಿ: ಹಾಡಹಗಲೇ ಮನೆ ಮುಂಬಾಗಿಲಿಗೆ ಅಳವಡಿಸಿದ್ದ ಕಬ್ಬಿಣ ಬಾಗಿಲು ಹಾಗೂ ಲಾಕರ್ ಮೀಟಿ ಮನೆಯೊಳಗೆ ನುಗ್ಗಿರುವ ಕಳ್ಳರು, ಬೀರುವಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾದನಾಯಕನಹಳ್ಳಿಯ ಸಿದ್ದನ ಹೊಸಹಳ್ಳಿ ನಿವಾಸಿ ಪ್ರಕಾಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಪ್ರಕಾಶ್ ಹಾಗೂ ಮನೆಯವರು ಕೆಲಸ ನಿಮಿತ್ತ ಹೊರಗೆಡೆ ಹೋಗಿದ್ದಾಗ ಮನೆಯ ಕಬ್ಬಿಣದ ಮುಂಬಾಗಿಲು ಹಾಗೂ ಲಾಕರ್ ಮುರಿದು ಒಳ ನುಗ್ಗಿ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4.5 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದಾರೆ. ಇನ್ನೂ ಇದೇ ಸಮಯದಲ್ಲಿ 3 ಮನೆಗೆ ಈ ಕಳ್ಳರು ಕಳವು ಮಾಡಲು ವಿಫಲಯತ್ನ ನಡೆಸಿದ್ದಾರೆ.
ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

