ಬೆಂಗಳೂರು: ನಿವೃತ್ತ ಶಿಕ್ಷಕಿಯೊಬ್ಬರು ಬುಧವಾರ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅವರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಾಲಹಳ್ಳಿಯ ಏರ್ ಫೋರ್ಸ್ ಈಸ್ಟ್ 7 ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಆಟದ ಮೈದಾನದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ವಾಯುಸೇನೆ ಸಿಬ್ಬಂದಿಯ ಅತ್ತೆ, 75 ವರ್ಷದ ರಾಜ್ದುಲಾರಿ ಸಿನ್ಹಾ ಅವರ ಮೇಲೆ ಸುಮಾರು ಏಳೆಂಟು ಬೀದಿ ನಾಯಿಗಳು ಹಠಾತ್ ದಾಳಿ ನಡೆಸಿದ್ದು, ತಲೆ ಹಿಂಬದಿ, ಮುಖ, ಕೈ, ಕತ್ತಿನ ಭಾಗವನ್ನು ಶ್ವಾನಗಳು ಕಚ್ಚಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಈ ಕುರಿತು ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

