News Karnataka Kannada
Friday, April 12 2024
Cricket
ರಾಮನಗರ

ರಾಮನಗರ: ಎರಡು ದಶಕದ ಬಳಿಕ ಮಳೆಗೆ ರಾಮನಗರ ತತ್ತರ

after-two-decades-ramanagara-is-reeling-from-rain
Photo Credit : By Author

ರಾಮನಗರ: ಮಳೆರಾಯ ಮತ್ತೊಮ್ಮೆ ಅಬ್ಬರಿಸಿದ್ದು ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ತಾಲ್ಲೂಕಿನಾಧ್ಯಂತ ಹಲವಾರು  ಗ್ರಾಮಗಳಲ್ಲಿ ಪ್ರವಾಹದ ರೂಪದಲ್ಲಿ ನೀರು ಉಕ್ಕಿ ಹರಿದಿದೆ.

ಈಗಾಗಲೇ ಬಹುತೇಕ ಕೆರೆ-ಕಟ್ಟೆಗಳು ಭರ್ತಿಯಾಗಿರುವುದರಿಂದ ಕೋಡಿ ಹಳ್ಳಗಳು ಮತ್ತು ತೊರೆಗಳಲ್ಲಿ ಪ್ರವಾಹದ ಮಾದರಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯಿತು. ಈ ವೇಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಕ್ಕೂ ದಾಳಿಯಿಟ್ಟು ಅಪಾರ ನಷ್ಟವನ್ನುಂಟು ಮಾಡಿದೆ.  ರಾಮನಗರದಲ್ಲಿ ಮಳೆ ಆರ್ಭಟಕ್ಕೆ ಹಿಂದೆಂದೂ ಕಾಣದ ಜಲಪ್ರಳಯವೇ ಉಂಟಾಗಿದೆ. ಕೇತೂಹಳ್ಳಿ ಕೆರೆಯಿಂದ ಅಧಿಕ ಪ್ರಮಾಣದ ನೀರು ಹರಿದು ಬಂದ ಕಾರಣ ಭಕ್ಷಿ ಕೆರೆಯ ಕೋಡಿ ಹೊಡೆದು ಪ್ರವಾಹ ಉಕ್ಕಿ ಹರಿದಿದೆ. ಸೀರಹಳ್ಳದ ಮೂಲಕ ನದಿಯಂತೆ ಹರಿದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಟಿಪ್ಪುನಗರ, ಗೌಸಿಯಾ ಮೊಹಲ್ಲಾ, ಅರ್ಕೇಶ್ವರ ಕಾಲೋನಿ, ಯಾರಬ್‌ನಗರ, ರೆಹಮಾನಿಯಾ ನಗರ ಮತ್ತು ಟ್ರೂಪ್‌ಲೇನ್ ಜನವಸತಿ ಪ್ರದೇಶಗಳು ಸಂಪೂರ್ಣ ಜಲಾವೃತ ಆದವು.

ಏಕಾಏಕಿ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ಥರು ರಕ್ಷಣೆಗಾಗಿ ಎತ್ತರದ ಮನೆಗಳ ಮೇಲೆ ಏರಿ ಕುಳಿತರು. ನಂತರ ಎನ್‌ಡಿಆರ್ ಹಾಗೂ ಅಗ್ನಿಶಾಮಕ  ಸಿಬ್ಬಂದಿ ತಂಡ ರಕ್ಷಣಾ ಕಾರ್ಯಚರಣೆಗೆ ಮುಂದಾದರು. ಕೆಲವು ಬಡಾವಣೆಗಳಲ್ಲಿ ಬೋಟ್ ಬಳಸಿ ಜನರನ್ನು ರಕ್ಷಣೆ ಮಾಡಲಾಯಿತು. ಭಾರಿ ಮಳೆಯಿಂದ ನಗರದಲ್ಲಿರುವ ಮತ್ತೊಂದು ಬೋಳಪ್ಪನ ಕೆರೆ ಭರ್ತಿಯಾಗಿದ್ದು ಕೋಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಕೋಡಿಪುರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿತು. ಬೋಳಪ್ಪನ ಕೆರೆಯಿಂದ ರಾಜಕಾಲುವೆ ಮೂಲಕ ನದಿಯಂತೆ ಹರಿದ ನೀರು ಉದ್ದಕ್ಕೂ ಅವಾಂತರ ಸೃಷ್ಟಿಸಿದೆ.

ತಗ್ಗು ಪ್ರದೇಶದಲ್ಲಿದ್ದ ಟಿಪ್ಪು ನಗರ ಹಾಗೂ ಅರ್ಕೇಶ್ವರನಗರ ಬಡಾವಣೆಗಳಲ್ಲಿ  7ರಿಂದ 8 ಅಡಿ ಎತರಕ್ಕೆ ನೀರು ಹರಿದಿದ್ದು, ಅರ್ಕೇಶ್ವರ ಕಾಲೋನಿಯಲ್ಲಿನ ಸರ್ಕಾರಿ ಶಾಲೆ ಸೇರಿದಂತೆ ಸಾವಿರಾರು ಮನೆಗಳು ಮುಳುಗಡೆಯಾದವು. ಬೈಕ್ ಮತ್ತು ಕಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಜನರು ಪ್ರಾಣದಿಂದ ಪಾರಾಗಲು ಮನೆ ತೊರೆದರೆ, ಎರಡು-ಮೂರು ಅಂತಸ್ತಿನ ಮನೆಯವರು ಆತಂಕದಲ್ಲಿದ್ದರು. ಮನೆಯಲ್ಲಿದ್ದ ದಿನಬಳಕೆ  ವಸ್ತುಗಳು ನೀರು ಪಾಲಾಗಿದ್ದು, ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಇಲ್ಲಿರುವ ರೇಷ್ಮೆ ರೀಲಿಂಗ್ ಘಟಕಗಳಿಗೂ ನೀರು ನುಗ್ಗಿದ ಪರಿಣಾಮ ಮಣ್ಣು, ಕಲ್ಮಶ ಮಿಶ್ರಿತ ನೀರಿನಿಂದ ರೇಷ್ಮೆ ನೂಲು ನಷ್ಟವಾಗಿದೆ.

ಸಾರಿಗೆ ಬಸ್ಸೊಂದು ನಗರದ ರೈಲ್ವೆ ಅಂಡರ್ ಪಾಸ್ ನಲ್ಲಿ ಬೆಳಗ್ಗೆ 6.45r ಸಮಯದಲ್ಲಿ ಸಿಲುಕಿ ಆತಂಕ ಸೃಷ್ಟಿಸಿತ್ತು. ಅಂಡರ್ ಪಾಸ್ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ಬಸ್ ಕೆಟ್ಟು ನಿಂತ ಕಾರಣ ತಕ್ಷಣ ಚಾಲಕ ವೆಂಕಟೇಶ್ ಬಸ್ಸಿನಲ್ಲಿದ್ದ 15 ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಅಂಡರ್ ಪಾಸ್ ನಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದ್ದಂತೆ ಚಾಲಕ ವೆಂಕಟೇಶ್, ನಿರ್ವಾಹಕ ಹಾಗೂ ವೃದ್ಧರೊಬ್ಬರು ಬಸ್ಸಿನ ಟಾಪ್ ಏರಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ  ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ನಾಗರೀಕರ ನೆರವಿನಿಂದ ಮೂವರನ್ನು ರಕ್ಷಣೆ ಮಾಡಲಾಗಿದೆ.

ಇನ್ನು ಬೆಂಗಳೂರು-ಮೈಸೂರು ಹೆದ್ದಾರಿಯ ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದ ಕಾರಣ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ರಾಮನಗರ ಹೊರವಲಯದ ಸಂಗನಬಸವನದೊಡ್ಡಿ ಸಮೀಪ ಅಂಡರ್ ಪಾಸ್ ನಲ್ಲಿ ಹೆಚ್ಚಿನ ಪ್ರಮಾಣದ ನೀರುಸಂಗ್ರಹವಾಗಿತ್ತು. ನೀರಿನಲ್ಲಯೇ ಚಲಿಸಲು ಮುಂದಾದ ವಾಹನಗಳು ಕೆಟ್ಟು ನಿಂತು ನೀರಿನಲ್ಲಿ ತೇಲಾಡಿದರೆ, ಸರ್ವಿಸ್ ರಸ್ತೆ ಪಕ್ಕದ ಕೃಷಿ ಜಮೀನುಗಳು ಕೆರೆಯಂತಾಗಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು