ರಾಮನಗರ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಂಸದ ಡಿಕೆ ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿದ್ದರು. ಏಪ್ರಿಲ್ 20ರಂದು ಡಿಕೆ ಸುರೇಶ್ ಸಹ ನಾಮಪತ್ರ ಸಲ್ಲಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಲ್ಲಿಸಿರುವ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಡಿಕೆ ಸುರೇಶ್ ಸಹ ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಂತೋಷ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುರೇಶ್, ಬಿಜೆಪಿಯ ಕುತಂತ್ರಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಹೀಗಾಗಿ ಕೆಲವೊಂದು ಮಾಹಿತಿಗಳ ಆಧಾರದ ಮೇಲೆ ನಾಮಪತ್ರ ಸಲ್ಲಿಸಿದ್ದೇನೆ. ಚುನಾವಣಾಧಿಕಾರಿಗಳು ಸಹ ಸರ್ಕಾರದ ಅಧೀನದಲ್ಲೇ ಇದ್ದಾರೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕರಿಸುವ ಆತಂಕ ವ್ಯಕ್ತಪಡಿಸಿದರು.