News Karnataka Kannada
Monday, April 29 2024
ರಾಮನಗರ

ಪಾದಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ, ‘ಡಿಕೆಶಿ’ಗೆ ರಾಮನಗರ ಎಸ್ಪಿ ಖಡಕ್ ಎಚ್ಚರಿಕೆ

Kpcc President Dk
Photo Credit :

ರಾಮನಗರ, (ಜ.08) : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾಳೆಯಿಂದ (ಜ. 9) ಕಾಂಗ್ರೆಸ್ ಪಾದಯಾತ್ರೆ ನಡೆಸಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಆದ್ರೆ, ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆ ಗ್ರಾಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಗಿರೀಶ್, ಸರ್ಕಾರ ವೀಕೆಂಡ್​ ಕರ್ಫ್ಯೂ ವಿಧಿಸಿರುವುದರಿಂದ ಈಗಾಗಲೇ ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ನೀಡಲು ಆಗುವುದಿಲ್ಲ, ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುಮತಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಪಾದಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ನಡುವೆ ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಬರುವುದಿಲ್ಲ. ಪಾದಯಾತ್ರೆ ಮಾಡುವುದು ತಪ್ಪು ಎಂದು ಕೇಳಿಕೊಳ್ಳುತ್ತೇನೆ. ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂಜಾಗ್ರತಾ ಕ್ರಮವಾಗಿ ಯಾರನ್ನೂ ವಶಕ್ಕೆ ಪಡೆಯುವುದಿಲ್ಲ. ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಪಾದಯಾತ್ರೆಗಾಗಿ ನಾವು ಬಂದೋಬಸ್ತ್ ಕೊಡುತ್ತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಭದ್ರತೆಗಾಗಿ 1,200 ಪೊಲೀಸರನ್ನು ನಿಯೋಜಿಸಿದ್ದೇವೆ ಎಂದರು.

ಆದ್ರೆ, ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಾದಯಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ಮಠಾಧೀಶರು, ಸಿನಿಮಾ ರಂಗಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮುಂಜಾಗ್ರತಾ ಕ್ರಮಗಳನ್ನು ವಹಿಸಿಯೇ ಮೇಕೆದಾಟು ಹೋರಾಟ ಮಾಡುತ್ತೇವೆ. 144 ಸೆಕ್ಷನ್ ವಿಧಿಸಿದರೆ ನಾವಿಬ್ಬರಾದರೂ ನಡೆಯುತ್ತೇವೆ. ನಾವು ಪಾದಯಾತ್ರೆ ಮಾಡಲು ಮೊದಲೇ ನಿರ್ಧರಿಸಿದ್ದೆವು. ನಾವು ನಿರ್ಧಾರ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರ ಹಿಂದಿನ ಉದ್ದೇಶವೇನೆಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹಾಗೇ, ರಾಮನಗರ ಜಿಲ್ಲೆಗೆ ಮಾತ್ರ ಏಕೆ ಕೆಲ ನಿಯಮ ಜಾರಿ ಇದೆ? ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ವಾರಾಂತ್ಯ ಕರ್ಪ್ಯೂ ಘೋಷಣೆ ಮಾಡಿದೆ. ವಾರಾಂತ್ಯದ ಕರ್ಪ್ಯೂ ಜಾರಿಮಾಡುವ ಹೊಣೆ ಅಧಿಕಾರಿಗಳ ಹೆಗಲಿಗೇರಿದೆ. ಅದರೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕರ್ಪ್ಯೂ ದಿನದಂದೇ ಆರಂಭವಾಗುತ್ತಿದೆ.

ಎರಡು ರಾಷ್ಟ್ರೀಯ ಪಕ್ಷಗಳ ಜಂಗಿ ಕುಸ್ತಿಯ ಕೇಂದ್ರಬಿಂದು, ಇಡೀ ರಾಜ್ಯದ ಗಮನ ತನ್ನ ಸೆಳೆದಿರುವ ಕಾಂಗ್ರಸ ಮೇಕೆದಾಟು ಪಾದಯಾತ್ರೆ ಜನವರಿ 9 ರಂದು ಪ್ರಾರಂಭವಾಗಿ ಜನವರಿ 19ರ ತನಕ ನಡೆಯಲಿದೆ. ಸುಮಾರು 160 ಕಿ. ಮೀ. ಸಂಚಾರ ಮಾಡಿ ಅಂತಿಮವಾಗಿ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು