ಬೆಂಗಳೂರು: ‘ರಾಮನಗರ’ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ಶ್ರೀರಾಮನ ಭೂಮಿಯೆಂದೇ ಖ್ಯಾತಿ ಪಡೆದಿರುವ ಭಾರತದಲ್ಲಿ ಶ್ರೀರಾಮನ ಹೆಸರನ್ನು ಅಳಿಸಿ ಹಾಕಿದರೆ ಅದನ್ನು ಹಿಂದು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ಈ ನಿರ್ಧಾರ, ಹಿಂದುಗಳ ಗಾಯಕ್ಕೆ ಉಪ್ಪು ಸವರಿದಂತಿದೆ. ಕಾಂಗ್ರೆಸ್ ಈ ಹಿಂದೆ ಶ್ರೀರಾಮನನ್ನು ಕಾಲ್ಪನಿಕ ಎಂದಿತ್ತು,

ನಂತರ ಶ್ರೀರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಈಗ ರಾಮನಗರದ ಹೆಸರು ಬದಲಾಯಿಸಿದೆ. ಇದರಿಂದ ಕಾಂಗ್ರೆಸ್‌ಗೆ ‘ಶ್ರೀರಾಮ’ನ ಬಗ್ಗೆ ವಿರೋಧವಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ.

ರಾಮನಗರ ಹೆಸರು ಬದಲಾವಣೆಗೆ ಹಿಂದುಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹೆಸರು ಬದಲಾವಣೆಯ ನಿರ್ಧಾರ ಹಿಂಪಡೆಯದಿದ್ದರೆ, ಹಿಂದು ಸಮಾಜ ಬೀದಿಗಿಳಿಯದೆ ಎಂದು ಎಚ್ಚರಿಕೆ ನೀಡಿದ್ದಾರೆ.