ಬೆಂಗಳೂರು: ಹಲವೆಡೆ ಮುಂದಿನ 12 ಗಂಟೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಲ್ಲಿ ಮಳೆರಾಯ ರಾತ್ರಿ ಇಡೀ ಆರ್ಭಟಿಸಿದ್ದಾನೆ. ಕೆಆರ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್ , ಕೆ.ಆರ್. ಮಾರುಕಟ್ಟೆ, ಜಯನಗರ, ವಿಜಯನಗರದಲ್ಲಿ ರಾತ್ರಿಇಡೀ ಭಾರೀ ಮಳೆಯಾಗಿದೆ. ಅಲ್ಲದೇ ಚಂದ್ರಲೇಔಟ್, ರಾಜಾಜಿನಗರ, ಆರ್.ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯದಲ್ಲಿ ವರುಣ ಆರ್ಭಟಿಸಿದ್ದು, ಬೊಮ್ಮನಹಳ್ಳಿ, ನಾಯಂಡಹಳ್ಳಿ, ಆರ್.ಆರ್ ನಗರದಲ್ಲಿ ಜೋರು ಮಳೆಯಾಗಿದೆ.
ಜೊತೆಗೆ ಮೇ 21ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆ ಸುರಿಯಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಾಂತಿನಗರದ ಸಿಸಿಬಿ ಕಚೇರಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸಿಸಿಬಿ ಕಚೇರಿ ಕಟ್ಟಡದ ಗ್ರೌಂಡ್ ಫ್ಲೋರ್ನಲ್ಲಿ ನೀರು ನುಗ್ಗಿದ ಪರಿಣಾಮ ದಾಖಲೆಗಳು ಹಾನಿಗೊಳಗಾಗಿವೆ. ಜೊತೆಗೆ ಸುಮಾರು 8ಕ್ಕೂ ಹೆಚ್ಚು ರೂಮ್ಗಳಲ್ಲಿದ್ದ ಫೈಲ್ಗಳ ನಾಶವಾಗಿದೆ. ಮಾತ್ರವಲ್ಲದೇ ರಾಜಕಾಲುವೆ ಚೆಂಬರ್ ಕೂಡ ಸಂಪೂರ್ಣ ಜಲಾವೃತಗೊಂಡಿದ್ದು ಕಾರು, ಜೀಪುಗಳು ಕೂಡ ಮುಳುಗಡೆಯಾಗಿವೆ.

