ಬೆಂಗಳೂರು : ಬಿಸಿಲಿನಿಂದ ಕಂಗಾಲಾಗಿರೋ ಜನರಿಗೆ ಮಳೆ ಸಿಂಚನ ಆಗಲಿದೆ. ಕೆಲ ಪ್ರದೇಶಗಳಲ್ಲಿ ಮಳೆರಾಯನ ಆಗಮನವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

ದಕ್ಷಿಣ ಕನ್ನಡ , ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯದಲ್ಲಿ ಗುಡಗು ಸಹಿತ ಸಾಧಾರಣ ಮಳೆಯಾಗಬಹುದೆಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಕೆಲ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದ್ದು, ಚಾಮರಾಜನಗರ, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ರಾತ್ರಿ ಸಮಯದಲ್ಲಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣ ಇರಲಿದೆ.