ಬೆಂಗಳೂರು: ರೈಲ್ವೆಯ ಉದ್ಯೋಗ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ.
2022ರಲ್ಲಿ ನಡೆದಿದ್ದ ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಯ ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜುಲೈ 3 ರಂದು ಈ ಬಂಧನ ನಡೆದಿದ್ದು, ಸಿಬಿಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬಂಧಿತರಿಬ್ಬರೂ ಈ ಇಡೀ ಹಗರಣದ ಪ್ರಮುಖ ಸೂತ್ರಧಾರಿಗಳು ಎಂದು ಸಿಬಿಐ ತಿಳಿಸಿದೆ. ಪರೀಕ್ಷೆ ನಡೆಯುವುದಕ್ಕಿಂತ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಯನ್ನು ಪಡೆದುಕೊಂಡು, ಅದನ್ನು ಆಯ್ದ ಅಭ್ಯರ್ಥಿಗಳಿಗೆ ತಲುಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಹಗರಣದ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ. ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಆರಂಭದಲ್ಲಿ 23 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಪರಾಧ ಸಂಚು, ವಂಚನೆ ಮತ್ತು ಅಕ್ರಮ ಲಂಚದ ಆರೋಪಗಳ ಅಡಿಯಲ್ಲಿ ಇವರೆಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

