ಬೆಂಗಳೂರು: ಅಮೆರಿಕದ ಪ್ರಸಿದ್ಧ ಲೆಕ್ಕಪತ್ರ ಸಂಸ್ಥೆ ‘ಎಂ.ಎಸ್‌. ಕ್ವಿಕ್‌ ಬುಕ್‌’ ಹೆಸರಿನಲ್ಲಿ ನಗರದ ಆಗ್ನೇಯ ವಿಭಾಗದಲ್ಲಿ ತೆರೆಯಲಾಗಿದ್ದ ನಾಲ್ಕು ನಕಲಿ ಕಾಲ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿರುವ ಸೈಬರ್ ಕಮಾಂಡ್‌ ಸೆಂಟರ್‌ನ ಅಧಿಕಾರಿಗಳು, ಅಂದಾಜು ₹40 ಕೋಟಿ ಅಕ್ರಮವನ್ನು ಬಯಲಿಗೆ ಬಂದಿದೆ. ಹೊರ ರಾಜ್ಯದ ಇಬ್ಬರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಪ್ರಶಾಂತ್‌ (35) ಹಾಗೂ ಉತ್ತರ ಪ್ರದೇಶದ ಆಕಾಶ್‌ (40) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ವಿವಿಧ ಬ್ಯಾಂಕ್‌ನಲ್ಲಿ ತೆರೆದಿದ್ದ ನಾಲ್ಕು ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಖಾತೆಗಳಲ್ಲಿ ಅಂದಾಜು ₹40 ಕೋಟಿ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ ಎಂದು ಸೈಬರ್ ಪೊಲೀಸರು ಹೇಳಿದರು.

ಕಾಲ್‌ ಸೆಂಟರ್‌ಗಳಿಂದ 44 ಎಸ್ಎಸ್‌ಡಿಗಳು (ಸಾಲಿಡ್‌ ಸ್ಟೇಟ್‌ ಡ್ರೈವ್ಸ್), ಎರಡು ಮೊಬೈಲ್‌, ಎರಡು ಲ್ಯಾಪ್‌ಟಾಪ್‌, ಒಂಬತ್ತು ಸಿಪಿಯುಗಳು, ಸ್ಕ್ರಿಪ್ಟ್‌ ನೋಟ್‌ಬುಕ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ಉಪಕರಣ ಜಪ್ತಿ ಮಾಡಲಾಗಿದೆ ಎಂದು ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಪ್ರಣವ್ ಮೊಹಾಂತಿ ತಿಳಿಸಿದರು.

ಖಚಿತ ಮಾಹಿತಿ ಆಧರಿಸಿ, ಆಗ್ನೇಯ ವಿಭಾಗದ ಸೈಬರ್ ಅಪರಾಧ ಠಾಣೆ ಹಾಗೂ ವಿಶೇಷ ಸೈಬರ್ ಸೆಲ್‌ನ ಸಿಬ್ಬಂದಿ, ನಗರದ ಚೂಡಸಂದ್ರ ಹಾಗೂ ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ತಲಾ ಒಂದು, ಕೋರಮಂಗಲದ ಎರಡು ನಕಲಿ ಕಾಲ್ ಸೆಂಟರ್‌ ಮೇಲೆ ದಾಳಿ ನಡೆಸಿದರು ಎಂದು ಮಾಹಿತಿ ನೀಡಿದರು.

ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಪ್ರಶಾಂತ್‌ ಹಾಗೂ ಆಕಾಶ್, ಪ್ರಮುಖ ಆರೋಪಿಯ ಜತೆಗೆ ನಕಲಿ ಕಾಲ್‌ ಸೆಂಟರ್‌ಗಳನ್ನು ಆರಂಭಿಸಿದ್ದರು. ಪ್ರತಿ ಕೇಂದ್ರದಲ್ಲಿ 25ರಿಂದ 30 ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕಾಲ್‌ ಸೆಂಟರ್‌ನಲ್ಲಿದ್ದ ಉದ್ಯೋಗಿಗಳು, ಅಮೆರಿಕದ ನಾಗರಿಕರಿಗೆ ಕರೆ ಮಾಡುತ್ತಿದ್ದರು. ತೆರಿಗೆ ಸಲಹೆ, ಪರವಾನಗಿ ನವೀಕರಣ ಸೇರಿದಂತೆ ಬೇರೆ ಬೇರೆ ಸೇವೆಗಳನ್ನು ಕಲ್ಪಿಸುವ ನೆಪದಲ್ಲಿ ವಂಚನೆ ನಡೆಸುತ್ತಿದ್ದರು ಎಂದು ಮಾಹಿತಿ ನೀಡಿದರು.