ಬೆಂಗಳೂರು : ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ವಾಹನಗಳನ್ನು ಪುಡಿಗೈದು ಅಟ್ಟಹಾಸ ಮೆರೆದಿದ್ದ ಮೂವರು ಕಿಡಿಗೇಡಿಗಳನ್ನು ಬೆಂಗಳೂರಿನ ವಿ.ವಿ. ಪುರಂನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ ಅಲಿಯಾಸ್ ಪಾಂಡು, ಉಮೇಶ್ ಮತ್ತು ಪುನೀತ್ ಅಲಿಯಾಸ್ ಟೋನಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಮೇ 20ರ ಬೆಳಗಿನ ಜಾವ 4 ಗಂಟೆಗೆ ನಡೆದಿದ್ದ ಈ ಪುಂಡಾಟದ ಸಿಸಿಟಿವಿ ದೃಶ್ಯಾವಳಿ ಲಭ್ಯವಾದ ಬೆನ್ನಲ್ಲೇ, ವಿ.ವಿ. ಪುರಂ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು.
ಆರೋಪಿ ಅಭಿಷೇಕ್ ಹಾಗೂ ಆತನ ತಮ್ಮ ರಾಹುಲ್ ಪತ್ನಿ ರಬಿಯಾ ನಡುವಿನ ಕೌಟುಂಬಿಕ ಕಲಹವೇ ಈ ಘಟನೆಗೆ ಮೂಲ ಕಾರಣ. ದಂಪತಿ ನಡುವಿನ ನಿರಂತರ ಗಲಾಟೆಯಿಂದ ಬೇಸತ್ತು ರಾಹುಲ್ ಮನೆ ಬಿಟ್ಟು ಹೋಗಿದ್ದ. ಇದೇ ಸಿಟ್ಟಿನಲ್ಲಿ ಮೇ 19ರಂದು ಅಭಿಷೇಕ್, ರಬಿಯಾ ಜೊತೆ ಜಗಳವಾಡಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಮರುದಿನ ಬೆಳಗಿನ ಜಾವ ರಬಿಯಾಳನ್ನು ಹೆದರಿಸಲು ತನ್ನ ಸ್ನೇಹಿತರೊಂದಿಗೆ ಬಂದ ಅಭಿಷೇಕ್, ಮನೆ ಬಳಿ ಹೈಡ್ರಾಮಾ ಮಾಡಿದ್ದಾನೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರ ಮೇಲೆ ಸುಖಾಸುಮ್ಮನೆ ಹಲ್ಲೆ ನಡೆಸಿ, ನಿಂತಿದ್ದ ಬೈಕ್‌ಗಳನ್ನು ಪುಡಿಗಟ್ಟಿ ವಿಕೃತಿ ಮೆರೆದಿದ್ದರು. ಇದೀಗ ಮೂವರು ಆರೋಪಿಗಳು ಜೈಲು ಪಾಲಾಗಿದ್ದಾರೆ.

